ಮಡಿಕೇರಿ, ನ. 25: ಗೃಹ ನಿರ್ಮಾಣ ಸಹಕಾರ ಸಂಘವು ರೈತರಿಂದ ಬಲವಂತವಾಗಿ ಸಾಲ ವಸೂಲಿಗೆ ಮುಂದಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಗೃಹ ನಿರ್ಮಾಣ ಸಹಕಾರ ಸಂಘದ ಎದುರು ಪ್ರತಿಭಟನೆ ನಡೆಯಿತು.

ಗೃಹ ನಿರ್ಮಾಣ ಸಹಕಾರ ಸಂಘದ 100ಕ್ಕೂ ಹೆಚ್ಚು ಸದಸ್ಯರು ಗೃಹ ನಿರ್ಮಾಣಕ್ಕೆ ಕಾಫಿ ತೋಟದ ದಾಖಲೆಯನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಆದರೆ ಬೆಲೆ ಕುಸಿತ ರಸಗೊಬ್ಬರದ ಮತಿಮೀರಿದ ಬೆಲೆ ಇತ್ಯಾದಿ ಸಮಸ್ಯೆಗಳಿಂದಾಗಿ ಸಾಲ ಕಟ್ಟಲಾಗದೆ ಬಾಕಿ ಉಳಿದಿದೆ. ಈ ನಡುವೆ ಕೇಂದ್ರ ಸರ್ಕಾರವು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾಲದ ಬಡ್ಡಿಯನ್ನು ಮನ್ನಾ ಮಾಡಿ, ಸಾಲವನ್ನು ಧೀರ್ಘ ಕಾಲದಲ್ಲಿ ಮರು ಪಾವತಿಸಲು ಅನವು ಮಾಡಿಕೊಟ್ಟಿದ್ದರೂ ಗೃಹ ನಿರ್ಮಾಣ ಸಹಕಾರ ಸಂಘದವರು ಸರ್ಕಾರದ ಆದೇಶವನ್ನು ಪಾಲಿಸದೆ ರೈತರು ಕೂಡಲೇ ಸಾಲ ಮರುಪಾವತಿ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಸಹಕಾರ ಸಂಘದ ಈ ನಿಲುವಿನ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಲಾಗಿದೆಯಾದರೂ ಸಹಕಾರ ಸಂಘ ಅದನ್ನು ಪರಿಗಣಿಸಿಸುತ್ತಿಲ್ಲ. ಬದಲಾಗಿ ಸಾಲ ಮರುಪಾವತಿ ಮಾಡದಿದ್ದರೆ ಸಾಲಗಾರರ ಮನೆ ಎದುರು ಧರಣಿ ಮಾಡುವದಾಗಿಯೂ, ಆಸ್ತಿಯನ್ನು ಹರಾಜು ಮಾಡುವದಾಗಿ ನೋಟೀಸ್ ನೀಡಿ ಬೆದರಿಕೆ ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತ ಸಂಘದ ಮನವಿ ಸ್ವೀಕರಿಸಿದ ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯದರ್ಶಿ ಬಿ.ಆರ್. ಗಣಪತಿ ಅವರು, ರೈತರಿಗೆ ನೀಡಿದ ನೋಟೀಸ್ ವಾಪಾಸ್ ಪಡೆದು ಕೂಡಲೇ ರೈತ ಮುಖಂಡರ ಸಮ್ಮುಖದಲ್ಲಿ ತುರ್ತು ಸಭೆ ಕರೆಯುವದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಾರ್ಯದರ್ಶಿ ಸುಜಯ್ ಬೋಪಯ್ಯ, ಖಜಾಂಚಿ ಚೋನಿರ ಸತ್ಯ, ಮುಖಂಡರುಗಳಾದ ಆದೇಂಗಡ ಅಶೋಕ್ ಮತ್ತಿತರರು ಪಾಲ್ಗೊಂಡಿದ್ದರು.