ಸೋಮವಾರಪೇಟೆ, ನ. 25: ಸರ್ಕಾರ ಮತ್ತು ಜನ ಸಾಮಾನ್ಯರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಜನಸ್ನೇಹಿ ಆಡಳಿತ ನೀಡಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ, ತಳ ಮಟ್ಟದಲ್ಲಿ ಸರ್ಕಾರಿ ಸೇವೆ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜನರನ್ನು ದೂರ ವಿಡುವ ಯತ್ನಗಳನ್ನು ನಡೆಸುತ್ತಿದ್ದಾರೆ. ಜನಸಾಮಾನ್ಯರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಸೇತು ಆಗಿ ಮಧ್ಯವರ್ತಿಗಳು ತೂರಿ ಬಂದಿದ್ದು, ಇವರುಗಳ ಪೋಷಣೆಯಲ್ಲೇ ಸೋಮವಾರಪೇಟೆ ತಾಲೂಕು ಕಚೇರಿ ಪಾವನಗೊಳ್ಳುತ್ತಿದೆ!

ತಾಲೂಕು ಕೇಂದ್ರದಲ್ಲಿರುವ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ಜನ ಸಾಮಾನ್ಯರು ಕಚೇರಿ ಪ್ರವೇಶಿಸುವದಕ್ಕೂ ಮುನ್ನವೇ ‘ಮಿಕ’ವನ್ನು ಬಲೆಗೆ ಬೀಳಿಸಿ ಬುಟ್ಟಿಗೆ ಹಾಕಿಕೊಳ್ಳುತ್ತಿರುವ ಇಂತಹ ಏಜೆಂಟರುಗಳಿಂದಾಗಿ ಹಲವಷ್ಟು ಮಂದಿ ತಹಶೀಲ್ದಾರ್ ಮುಖವನ್ನೂ ನೋಡದೇ ಹಿಂತಿರುಗುತ್ತಿದ್ದಾರೆ.

ಅಮಾಯಕ ಮಂದಿಯಿಂದ ಜಾತಿ, ಆದಾಯ ದೃಢೀಕರಣ ಪತ್ರ ಸೇರಿದಂತೆ ಜಾಗಗಳ ನಕಾಶೆ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಸರ್ವೆ, ಕಂದಾಯ ಇಲಾಖೆ ಸಂಬಂಧಿತ ಕೆಲಸ ಕಾರ್ಯಗಳಿಗೆ ಮನಸೋಯಿಚ್ಛೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ.

ನಾಲ್ಕು ಸೆಂಟ್ ಜಾಗ ಹೊಂದಿರುವ ಏಜೆಂಟರುಗಳು ನೂರಾರು ಎಕರೆ ಜಾಗದ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಪ್ರತಿದಿನ ಬೆಳಗ್ಗಿನಿಂದ ಸಂಜೆಯವರೆಗೂ ತಾಲೂಕು ಕಚೇರಿಗೆ ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ನಾಲ್ಕೈದು ಮಂದಿ ಬ್ರೋಕರ್‍ಗಳಿಗೆ ಇದೇ ವೃತ್ತಿಯಾಗಿ ಪರಿಣಮಿಸಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಲೆಗೆ ಹಾಕಿ ಒಲಿಸಿಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಗಳು ಮೂಡುತ್ತಿವೆ.

ಕಂದಾಯ ಇಲಾಖೆಯಂತೂ ಭ್ರಷ್ಟಾಚಾರದ ಪರಮಾವಧಿಗೆ ತಲುಪಿದೆ. ಇತ್ತೀಚೆಗಷ್ಟೇ ಜಾಗದ ವರ್ಗಾವಣೆಗಾಗಿ 78 ಸಾವಿರ ಹಣ ಪಡೆದು, ಹೆಚ್ಚುವರಿಯಾಗಿ 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದ ಶಿರಸ್ತೇದಾರ್ ಧರ್ಮಪ್ಪ ಅವರ ‘ಟ್ರ್ಯಾಪ್’ ನಡೆದ ತರುವಾಯ ಎರಡು ದಿನಗಳ ಕಾಲ ಕಚೇರಿಯಿಂದ ಮಾಯವಾಗಿದ್ದ ಏಜೆಂಟರುಗಳು ಮತ್ತೆ ವಕ್ಕರಿಸಿಕೊಂಡಿದ್ದಾರೆ.

ಇದರೊಂದಿಗೆ 94 ಸಿ. ಮತ್ತು 94 ಸಿ.ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಒತ್ತುವರಿಯನ್ನು ಸಕ್ರಮಗೊಳಿ ಸುವಂತೆ ಮನವಿ ಮಾಡಿಕೊಂಡಿರುವ ಕೃಷಿಕರ ಮೇಲೆ ಏಜೆಂಟರು ಮತ್ತು ಅಧಿಕಾರಿಗಳ ಕಣ್ಣುಬಿದ್ದಿದ್ದು, ಎಕರೆಯೊಂದಕ್ಕೆ 20 ರಿಂದ 25 ಸಾವಿರ ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಸಹ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ಹಣ ಪೀಕುವವರ ವಿರುದ್ಧ ಸರ್ಕಾರಕ್ಕೆ ದೂರು ನೀಡುವ ಎಚ್ಚರಿಕೆ ನೀಡಿದ್ದರೂ ಸಹ ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿಕ್ಕಾಸು ಬೆಲೆಯೂ ನೀಡಿಲ್ಲ.

ಸೋಮವಾರಪೇಟೆಯಲ್ಲಿರುವ ಸಂಘವೊಂದಕ್ಕೆ ನಿವೇಶನ ಕೊಡಿಸುವ ಭರವಸೆ ನೀಡಿ, ‘ತಹಶೀಲ್ದಾರ್ ನನಗೆ ಆತ್ಮೀಯರು, ಕಂದಾಯ ಸಚಿವರು ನಮ್ಮದೇ ಪಕ್ಷದವರು, ಎ.ಸಿ., ಡಿ.ಸಿ. ಹತ್ರ ನಾನೇ ಮಾತಾಡಿ ನಿವೇಶನ ಕೊಡಿಸುತ್ತೇನೆ’ ಎಂದು ಕಿವಿ ಮೇಲೆ ಹೂವಿಟ್ಟು ಸಂಘದವರಿಂದ 25 ಸಾವಿರ ಹಣ ಪಡೆದ ಮಧ್ಯವರ್ತಿ ಯೊಬ್ಬ ಸದ್ಯಕ್ಕೆ ಸೋಮವಾರ ಪೇಟೆಯಿಂದ ನಾಪತ್ತೆಯಾಗಿ ತಿಂಗಳು ಕಳೆದಿವೆ.

ತಾಲೂಕು ಕಚೇರಿಯ ಯಾವದೇ ಕೆಲಸ ಕಾರ್ಯಗಳಿಗೆ ಈ ಮಧ್ಯವರ್ತಿಗಳನ್ನು ಸಂಪರ್ಕಿಸಿದರೆ ಸಾಕು. ಕೇಳಿದ ಹಣ ನೀಡಿದರೆ ಸಕಾಲದಲ್ಲಿ ಕೆಲಸ ಗ್ಯಾರಂಟಿ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಅಧಿಕಾರಿಗಳೂ ಸಹ ಮಧ್ಯವರ್ತಿಗಳ ಕೆಲಸವನ್ನು ಶೀಘ್ರವಾಗಿ ಮಾಡುವದು, ಸಾರ್ವನಿಕರ ಕೆಲಸ ಕಾರ್ಯಗಳಿಗೆ ದಿನಗಟ್ಟಲೆ ಅಲೆದಾಡಿಸುವ ಮೂಲಕ ಪರೋಕ್ಷವಾಗಿ ಏಜೆಂಟರುಗಳನ್ನು ಪೋಷಿಸುತ್ತಿದ್ದಾರೆ.

ಬಹುತೇಕ ಮಧ್ಯವರ್ತಿಗಳು ಕಚೇರಿಯ ಎಲ್ಲಾ ಕೆಲಸದ ದಿನಗಳಲ್ಲಿ ತಾಲೂಕು ಕಚೇರಿಯಲ್ಲಿ ಹಾಜರಿರುತ್ತಾರೆ. ಅವರಿವರ ದಾಖಲೆ ಪತ್ರಗಳನ್ನು ಸಿದ್ದಪಡಿಸುವದು. ಇಂತಹ ದಾಖಲೆಗೆ ಇಂತಿಷ್ಟು ಹಣವೆಂದು ನಿಗದಿಗೊಳಿಸಿ, ತಹಶೀಲ್ದಾರ್‍ಗೆ ಇಷ್ಟು, ಅಧಿಕಾರಿಗೆ ಇಷ್ಟು ಎಂದು ಹೇಳಿಕೊಂಡು ಅವರುಗಳ ಘನತೆಗೂ ಕುಂದು ತರುವ, ಇಡೀ ಇಲಾಖೆಯೇ ಭ್ರಷ್ಟಾಚಾರಿಗಳ ತಾಣ ಎಂಬಂತೆ ಬಿಂಬಿಸುವ ಕೆಲಸಕ್ಕೂ ಕೆಲ ಏಜೆಂಟರುಗಳು ಮುಂದಾಗಿದ್ದಾರೆ.

ತಾಲೂಕು ಕಚೇರಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದ್ದು, ಇದನ್ನು ಪರಿಶೀಲಿಸಿದರೆ ವಾರದ ಎಲ್ಲಾ ದಿನಗಳಲ್ಲೂ ಕಚೇರಿಯಲ್ಲೇ ಕಂಡುಬರುವ ಮಧ್ಯವರ್ತಿಗಳು ಕಾಣಸಿಗುತ್ತಾರೆ. ಇಂತವರನ್ನು ದೂರವಿಟ್ಟು, ಸಾರ್ವಜನಿಕರ ಕೆಲಸಕಾರ್ಯಗಳನ್ನು ಖುದ್ದು ಅಧಿಕಾರಿಗಳೇ ಮಾಡಿಕೊಡುವ ಸುಧಾರಣಾ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾಧಿ ಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ವ್ಯವಸ್ಥೆ ಸುಧಾರಿಸಲಿದೆ.

- ವಿಜಯ್ ಹಾನಗಲ್