ಕುಶಾಲನಗರ, ನ. 25: ಮಾವುತನ ಮೇಲೆ ಧಾಳಿ ಮಾಡಿದ ಸಾಕಾನೆಯೊಂದು ಘಟನೆ ನಂತರ ನಾಪತ್ತೆಯಾದ ಪ್ರಕರಣ ಕುಶಾಲನಗರದ ಆನೆಕಾಡು ಸಾಕಾನೆ ಶಿಬಿರದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಹೇರೂರು ಬಳಿ ತನ್ನ ಮಾವುತನನ್ನು ಗಾಯಗೊಳಿಸಿದ ಮಯೂರ ಆನೆ ನಂತರ ಕಾಣೆಯಾಗಿತ್ತು. ಗಾಯಗೊಂಡ ಮಾವುತ ಮಣಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತ ನಾಪತ್ತೆಯಾದ ಆನೆ ಪತ್ತೆ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದರು.

ಶುಕ್ರವಾರ ಪತ್ತೆಯಾಗದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಅಪರೇಷನ್ ಮಯೂರ ಪ್ರಾರಂಭಿಸಿದ ಅರಣ್ಯ ಇಲಾಖೆ ತಂಡ ಕೊನೆಗೂ ಪಿರಿಯಾಪಟ್ಟಣ ಭಾಗದ ದೊಡ್ಡಹರವೆ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಘಟನೆ ನಂತರ ರಾತ್ರಿ ಆನೆಕಾಡು, ಅತ್ತೂರು ಮೀಸಲು ಅರಣ್ಯದ ಮೂಲಕ ಕಾವೇರಿ ನದಿ ದಾಟಿ ಗಡಿಭಾಗದ ಸೇಟು ಫಾರಂ ಬಳಿ ಇರುವ ಮಾಹಿತಿ ದೊರೆತಿದೆ.

ಈ ಸಂದರ್ಭ ಆನೆ ಅಲ್ಲಿನ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ಬೆಳೆಹಾನಿ ಮಾಡಿದ್ದಲ್ಲದೆ ಶಾಲೆ ಬಳಿ ಸುತ್ತಾಡುತ್ತಿದ್ದು ಭಯಭೀತರಾದ ಜನತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ದುಬಾರೆ ಸಾಕಾನೆಗಳಾದ ಹರ್ಷ, ವಿಕ್ರಂ, ಪ್ರಶಾಂತ್, ವಿಜಯ ಸಹಾಯದೊಂದಿಗೆ ಸಹಾಯಕ ಅರಣ್ಯಾಧಿಕಾರಿ ರಂಜನ್, ಚರಣ್, ರಮೇಶ್ ಮತ್ತು ಚಾಲಕ ಸತೀಶ್, ಮಾವುತ ಭೋಜ ಮತ್ತು ತಂಡ ಮಯೂರ ಆನೆಯನ್ನು ಮತ್ತೆ ಆನೆಕಾಡು ಶಿಬಿರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮಾವುತ ಮಣಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಸಹಾಯಕ ಅರಣ್ಯಾಧಿಕಾರಿ ರಂಜನ್ ತಿಳಿಸಿದ್ದಾರೆ.