ಸುಂಟಿಕೊಪ್ಪ, ನ. 26: ನಿವೇಶನ ರಹಿತರಿಗೆ ‘ಸೂರು’ ಕಲ್ಪಿಸಲು ನಿವೇಶನ ಇಲ್ಲ... ಬಸ್ ನಿಲ್ದಾಣ, ಮಾರುಕಟ್ಟೆ ನಿರ್ಮಿಸಲೂ ಜಾಗವಿಲ್ಲ. ಆದರೆ ನೂರಾರು ಎಕರೆ ಕಾಫಿ ತೋಟ ಹೊಂದಿರುವ ಖಾಸಗಿ ತೋಟದ ಖಾತೆಗೆ ಕಡಂಗ ಜಾಗವನ್ನು ನಿವೇಶನ ಮಂಜೂರಾತಿ ಆಗಲು ಯಾವದೇ ತಕರಾರು ಇಲ್ಲ! ಇದು ಕಂದಾಯ ಇಲಾಖೆಯ ಸಿಬ್ಬಂದಿಗಳ ಅಧಿಕಾರಿಗಳ ಕರಾಮತ್ತಿನ ಒಂದು ನಿದರ್ಶನ.ಸುಂಟಿಕೊಪ್ಪದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ ನಿರ್ಮಿಸಬೇಕೆಂದು ಗ್ರಾಮಸ್ಥರು ದಶಕಗಳಿಂದ ಜನಪ್ರತಿನಿಧಿಗಳಿಗೆ ಬೇಡಿಕೆ ಮುಂದಿಡುತ್ತಾ ಬರುತ್ತಿದ್ದಾರೆ. ಆದರೆ ಅದಕ್ಕೆ ನಿವೇಶನ ಎಲ್ಲೂ ಸಿಗುತ್ತಿಲ್ಲ ಎಂದು ಜನಪ್ರತಿನಿಧಿಗಳ ರೆಡಿಮೇಡ್ ಉತ್ತರವಾಗಿದೆ.
ಶಾಸಕ ಅಪ್ಪಚ್ಚು ರಂಜನ್ ಬೇಡಿಕೆಗೆ ಸ್ಪಂದಿಸಿ ಈ ಹಿಂದೆ ತಹಶೀಲ್ದಾರರಾಗಿದ್ದವರಿಗೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸರಕಾರಿ ಪೈಸಾರಿ ಜಾಗ ಪತ್ತೆ ಮಾಡಿಕೊಡಲು ಸೂಚಿಸಿದ್ದರು. ಅದರಂತೆ ಕಂದಾಯ ಪರಿವೀಕ್ಷಕರು ಸರ್ವೆ ಇಲಾಖೆಯ ಅಧಿಕಾರಿಗಳು ಸುಂಟಿಕೊಪ್ಪ ಆಸುಪಾಸಿನ ಜಾಗದ ಪತ್ತೆಗೆ ಬಂದು ಅಲ್ಲಿ ಇಲ್ಲಿ ಎಲ್ಲಾ ಭಾಗದಲ್ಲೂ ಸರ್ವೆ ಮಾಡುವ ನಾಟಕವಾಡಿ ಎಲ್ಲೂ ಸರಕಾರಿ ಜಾಗವಿಲ್ಲ ಕಡಂಗವೂ ಇಲ್ಲ ಎಲ್ಲಾ ಮಾಲೀಕರ ಜಾಗಕ್ಕೆ ಸೇರ್ಪಡೆಯಾಗಿದೆ ಎಂದು ಷರಾ ಬರೆದು ಹಿರಿಯ ಅಧಿಕಾರಿಗಳಿಗೆ ನೀಡಿ ಇತಿಶ್ರೀ ಹಾಕಿದರು.
ನಿವೇಶನ ರಹಿತರಿಗೂ ‘ಸೂರಿ’ಗೆ ಜಾಗವಿಲ್ಲ: ಸುಂಟಿಕೊಪ್ಪ ಕಂಬಿಬಾಣೆ ನಾಕೂರು ಶಿರಂಗಾಲ ಕೆದಕಲ್, ಕೊಡಗರಹಳ್ಳಿ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ 5 ದಶಕಗಳ ಹಿಂದಿನಿಂದಲ್ಲೂ ಪೈಸಾರಿ ದೇವರಕಾಡು, ಕಡಂಗ ಜಾಗದಲ್ಲಿ ಸಣ್ಣ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಅವರುಗಳಿಗÉ ಅರ್ಜಿ ನೀಡಿದ್ದರೂ ಹಕ್ಕುಪತ್ರ ನೀಡಲು ಕಂದಾಯ ಇಲಾಖೆಯವರು ಮೀನಾಮೇಷ ಎಣಿಸುತ್ತಿದ್ದಾರೆ. ತಲತಲಾಂತರದಿಂದ ಇಲ್ಲೇ ಹುಟ್ಟಿ ಬೆಳೆದವರಿಗೆ ಅನೇಕ ಬಡವರಿಗೆ ಇನ್ನೂ ‘ಸೂರು’ ದೊರಕದೆ ಇರುವ ನಿದರ್ಶನವೂ ಇದೆ. ಇವರಿಗೆ ಜಾಗ ಗುರುತಿಸಿ ಕೊಡುವ ಇರಾದೆ ಕಂದಾಯ ಇಲಾಖೆಯವರಿಗೆ ಇದ್ದಂತಿಲ್ಲ.
ಶ್ರೀಮಂತರಿಗೆ ಕಡಂಗ ಜಾಗ: ಉಲುಗುಲಿ ಗ್ರಾಮದ ಸರ್ವೆ ನಂ. 183 ರಲ್ಲಿರುವ 1.5 ಎಕರೆ ಕಡಂಗ ಜಾಗವನ್ನು ಕಂದಾಯ ಇಲಾಖೆ ಯವರು ನೂರಾರು ಎಕರೆ ತೋಟ ವಿರುವ ಮಾಲೀಕರ ಖಾತೆಗೆ ಮಂಜೂರು ಮಾಡಿ ಕೊಟ್ಟಿರುವದು ಬೆಳಕಿಗೆ ಬಂದಿದೆ. ಇದರ ಮಾಲೀಕರ ಸಹೋದರಿ ಹೆಸರಿನಲ್ಲಿಯೂ ಸರ್ವೆ ನಂ. 118 ರಲ್ಲಿ 2 ಎಕರೆ ಕಡಂಗ ಜಾವನ್ನು ಮಂಜೂರು ಮಾಡಿ ಖಾತೆ ಬದಲಾವಣೆಗೊಳಿಸಲಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಆಗುವ ಬಸ್ ನಿಲ್ದಾಣ, ಮಾರುಕಟ್ಟೆ, ನವಗ್ರಾಮ ಯೋಜನೆಯಲ್ಲಿ ಬಡವರಿಗೆ ನೀವೇಶನದಲ್ಲಿ ‘ಸೂರು’ ಕಲ್ಪಿಸಲು ಜಾಗ ಪತ್ತೆ ಹಚ್ಚಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಮಯವಿಲ್ಲ ಬೃಹತ್ ಕಾಫಿ ತೋಟದ ಮಾಲೀಕರ ಖಾತೆಗೆ ಕಡಂಗ ಜಾಗ ಸಲೀಸಾಗಿ ವರ್ಗಾವಣೆ ಆಗುತ್ತದೆ.
ಅಂದಾಜು 6 ತಿಂಗಳ ಹಿಂದೆ ಸುಂಟಿಕೊಪ್ಪ ನಾಡಕಚೇರಿಗೆ ಜಿಲ್ಲಾಧಿಕಾರಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಭೇಟಿ ನೀಡಿ ಗ್ರಾಮ ಪಂಚಾಯಿತಿ ನಮೂನೆ 9. 11. 11 ಬಿ ಗೆ ಸಂಬಂಧಿಸಿದ ವಿಷಯ ವನ್ನು ಪಿಡಿಓ ಅವರೊಂದಿಗೆ ಮಾಹಿತಿ ಬಯಸಿದ್ದರು. ಅಲ್ಲದೆ ಕಂದಾಯ ಇಲಾಖೆಯವರು ಸುಂಟಿಕೊಪ್ಪ ವ್ಯಾಪ್ತಿಯ ಸರಕಾರಿ ಪೈಸಾರಿ ಜಾಗವನ್ನು ಪತ್ತೆ ಹಚ್ಚಿ ಸುಂಟಿಕೊಪ್ಪ ಬಸ್ ನಿಲ್ದಾಣ ಹೈಟೆಕ್ ಮಾರುಕಟ್ಟೆ ಒದಗಿಸಬೇಕೆಂದು ಆದೇಶ ನೀಡಿ ಹೋಗಿದ್ದರೂ ಅದು ಇನ್ನೂ ಕಾರ್ಯ ಗತವಾಗಿಲ್ಲ ಎಂಬದನ್ನು ಇಲ್ಲಿ ನೆನಪಿಸಬೇಕಾಗಿದೆ.
ಪಂಚಾಯಿತಿ ಕಟ್ಟಡವೇ ನೆಲಸಮ?: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಎಂಬದಾಗಿ ಕೇಂದ್ರ ರಸ್ತೆ ಭೂ ಸಾರಿಗೆ ಇಲಾಖೆ ಗುರುತಿಸಿದ್ದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾದರೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಟ್ಟಡ ನೆಲಸಮ ವಾಗಲಿದೆ. ಆಗ ಬದಲಿ ಪಂಚಾಯಿತಿ ಕಟ್ಟಡ ನಿರ್ಮಿಸಲು ಜಾಗದ ಆಲಭ್ಯತೆ ಇದೆ. ತೋಟ ಮಾಲೀಕರಿಗೆ ಉಲುಗುಲಿ ಗ್ರಾಮದ ಸರ್ವೆ ನಂ. 183 ರ 1.5 ಎಕರೆ ಜಾಗ ಮತ್ತು ಸರ್ವೆ ನಂ. 118 ರ 2 ಎಕರೆ ಜಾಗ ಮಂಜೂರಾತಿ ಮಾಡಿದ್ದನ್ನೂ ರದ್ದುಗೊಳಿಸಿ ಬಸ್ ನಿಲ್ದಾಣ ಮಾರುಕಟ್ಟೆ ನವಗ್ರಾಮ ಹಾಗೂ ಪಂಚಾಯಿತಿ ಕಟ್ಟಡಕ್ಕೆ ಜಾಗ ಮಂಜೂರಾತಿ ಮಾಡಿಕೊಡಲು ಜಿಲ್ಲಾಧಿಕಾರಿಗಳು ಮುಂದಾಗಬೇಕು ಆ ನಿಟ್ಟಿನಲ್ಲಿ ಸಮಾಜ ಮುಖಿ ಸೇವೆಗೆ ಅವಕಾಶ ಮಾಡಿ ಕೊಡುವಂತಾಗಲಿ.
- ರಾಜು ರೈ