ಮಡಿಕೇರಿ, ನ. 26: ಇದು ಒಂದೆರಡು ವರ್ಷಗಳ ಹೋರಾಟವಲ್ಲ. ಇದೊಂದು ತಪಸ್ಸಿನ ರೀತಿಯ ಹೋರಾಟ. ಭಾರತದ ಸಂವಿಧಾನದಂತೆ ಸಂವಿಧಾನ ಬದ್ಧವಾದ ಬೇಡಿಕೆಯನ್ನು ಮುಂದಿರಿಸಿ ನಡೆಸುತ್ತಿರುವ ಹೋರಾಟ... ಇದಕ್ಕೆ ಜಯ ಸಿಗುವ ತನಕವೂ ಇದನ್ನು ಮುಂದುವರಿಸುವ ಪ್ರತಿಜ್ಞೆಯೊಂದಿಗೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ 27ನೇ ವರ್ಷದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮ ಇಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಿತು.

ವಿಶೇಷವೆಂಬಂತೆ ಈ ಬಾರಿ ದೇಶ ಕಂಡಿರುವ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಖ್ಯಾತ ಅರ್ಥಶಾಸ್ತ್ರಜ್ಞ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ವಾಂಸ, ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರದ ಮಾಜಿ ಕಾನೂನು ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಪಾಲ್ಗೊಂಡು ಸಂಘಟನೆಯ ಬೇಡಿಕೆಗೆ ಸಹಮತ ವ್ಯಕ್ತಪಡಿಸಿ ಬೆಂಬಲ ನೀಡುವದಾಗಿ ಘೋಷಿಸಿದರು. ಇವರೊಂದಿಗೆ ಮತ್ತೋರ್ವ ಅತಿಥಿಯಾಗಿ ಪಾಲ್ಗೊಂಡಿದ್ದ ವಿರಾಟ್ ಹಿಂದೂ ಸಂಗಂನ ರಾಷ್ಟ್ರೀಯ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರೂ ಹೋರಾಟವನ್ನು ಬೆಂಬಲಿಸಿದರು.

ಸಿಎನ್‍ಸಿ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ನಗರದ ಗಾಂಧಿ ಮೈದಾನದಲ್ಲಿಂದು 27ನೇ ವರ್ಷದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಹಿಂದಿನ ವರ್ಷಗಳಂತೆ ಇಡೀ ನಗರದಲ್ಲಿ ಮರೆವಣಿಗೆ ಇರಲಿಲ್ಲ. ಅತಿಥಿ ಡಾ. ಸುಬ್ರಮಣಿಯನ್ ಸ್ವಾಮಿ ಅವರು ‘ಝಡ್’ ಭದ್ರತೆ ಹೊಂದಿರುವ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲಾಗಿತ್ತು. ಬದಲಿಗೆ ಗಾಂಧಿ ಮೈದಾನದ ವೇದಿಕೆಯ ಮುಖ್ಯದ್ವಾರದಿಂದ ತೆರೆದ ವಾಹನದಲ್ಲಿ ರಸ್ತೆಯಲ್ಲಿ ಅತಿಥಿಗಳನ್ನು ಕಾಫಿ ಕೃಪಾ ಕಟ್ಟಡದ ಸನಿಹದ ತನಕ ಮೆರವಣಿಗೆಯಲ್ಲಿ ಕರೆದೊಯ್ದು ಅಲ್ಲಿನ ದ್ವಾರದಿಂದ ಮೈದಾನಕ್ಕೆ ಆಗಮಿಸಲಾಯಿತು. ಅತಿಥಿಗಳೊಂದಿಗೆ ನಾಚಪ್ಪ ಅವರು ವಾಹನದಲ್ಲಿದ್ದರು. ಈ ಸಂದರ್ಭ ಸಾಂಪ್ರದಾಯಿಕ ಧಿರಿಸಿನಲ್ಲಿದ್ದ ಪುರುಷರು, ದುಡಿಕೊಟ್ಟ್ ಪಾಟ್ ಹಾಗೂ ಕೋವಿ ಹಿಡಿದು ವಾಹನದೊಂದಿಗೆ ಸಾಗಿದರು. ಮೈದಾನದೊಳಗೆ ಇಕ್ಕೆಲೆಗಳಲ್ಲಿ ತಳಿಯತಕ್ಕಿ ಬೊಳಕ್‍ನೊಂದಿಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ನಿಂತಿದ್ದ ಮಹಿಳೆಯರು ವಾಹನ ಸಾಗಿದಾಗ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಜಯ ಘೋಷದ ನಡುವೆ ಆಗಮಿಸಿದ ಸುಬ್ರಮಣಿಯನ್ ಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮತ್ತೋರ್ವ ಅತಿಥಿ ಜಗದೀಶ್ ಶೆಟ್ಟಿ ಹಾಗೂ ಎನ್.ಯು. ನಾಚಪ್ಪ ಅವರೂ ಆಗಸಕ್ಕೆ ಗುಂಡು ಹಾರಿಸಿದರೆ, ಬಳಿಕ ಈ ಮೂವರು ಬಾಳೆ ಕಡಿಯುವದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಈ ಸಂದರ್ಭ ಬೊಳಕಾಟ್ ಪ್ರದರ್ಶನ ನಡೆಯಿತು.

ಶಾಶ್ವತ ಪರಿಹಾರದ ನಿಟ್ಟಿನ ಹೋರಾಟ

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಸಂಘಟನೆ ರಸ್ತೆ, ಸೇತುವೆ, ಇತ್ಯಾದಿ ಸಣ್ಣಪುಟ್ಟ ವಿಚಾರದ ಕುರಿತಾಗಿ ಹೋರಾಡುತ್ತಿಲ್ಲ. ಕೊಡವ ಸಮುದಾಯ ಇಂದು ತುಳಿತಕ್ಕೆ ಒಳಗಾಗುತ್ತಿದೆ. ಹಲವು ರೀತಿಯಲ್ಲಿ ಆತಂಕ ಎದುರಿಸುವಂತಾಗಿದ್ದು, ದುಷ್ಟಶಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಈ ನೆಲದಲ್ಲಿ ಅನಾದಿ ಕಾಲದಿಂದಲೂ ನೆಲಸಿರುವ ಕೊಡವರಿಗೆ ಅವರು ಹೊಂದಿರುವ ಹಕ್ಕಿಗೆ ಸಂವಿಧಾನದತ್ತವಾದ ಭದ್ರತೆ ನೀಡಬೇಕು. ಸಂವಿಧಾನ ಬದ್ಧವಾದ ಬೇಡಿಕೆ ಇದಾಗಿದ್ದು, ಈ ನಿಟ್ಟಿನಲ್ಲಿ ತಪಸ್ಸಿನ ರೀತಿಯಲ್ಲಿ ಹೋರಾಟವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಸ್ವಾಯತ ಕೊಡವ ಲ್ಯಾಂಡ್ ಘೋಷಣೆ, ಕೊಡವರನ್ನು ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವಾಗಿ ಪರಿಗಣನೆ ಸೇರಿದಂತೆ ಕರ್ನಾಟಕದಡಿಯಲ್ಲೇ ನಿಜವಾಗಿ ಅಲ್ಪಸಂಖ್ಯಾತರಾಗಿರುವ ವಿಶಿಷ್ಟ ಆಚಾರ ವಿಚಾರ ಹೊಂದಿರುವ ಜನಾಂಗಕ್ಕೆ ಸಂವಿಧಾನದಲ್ಲಿ ಅಡಕವಾಗಿರುವ ಅವರ ಹಕ್ಕನ್ನು ನೀಡಬೇಕು. ಈ ನಿಟ್ಟಿನಲ್ಲಿ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಾದಿಸಿದರು. ಟಿಪ್ಪು ಜಯಂತಿ ಆಚರಣೆಯ ನೋವು ಸೇರಿದಂತೆ ಪ್ರಸ್ತುತದ ಹತ್ತು ಹಲವು ಸಮಸ್ಯೆ-ಆತಂಕದ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲಿದರು.

ಚಳುವಳಿಯನ್ನು ನಿಲ್ಲಿಸಲು ತನಗೆ ಹಲವು ಸ್ಥಾನಮಾನಗಳ ಆಸೆ ಆಮಿಷಗಳನ್ನು ಒಡ್ಡಲಾಗಿತ್ತಾದರೂ, ಕೊಡವ ಭೂಮಿ ಹಾಗೂ ಮಣ್ಣನ್ನು ರಕ್ಷಿಸುವ ಪಣ ತೊಟ್ಟು ಅವೆಲ್ಲವನ್ನು ತಿರಸ್ಕರಿಸಿ ಕರ್ನಾಟಕ ರಾಜ್ಯದಲ್ಲಿಯೇ ಇದ್ದುಕೊಂಡು ಸ್ವಾಯತ್ತ ಕೊಡವ ಲ್ಯಾಂಡ್‍ಗಾಗಿ ಹೋರಾಡುತ್ತಿರುವದಾಗಿ ತಿಳಿಸಿದರು. ದೇಶಕ್ಕಾಗಿ ಕೊಡವ ರಕ್ತ ಹರಿದಿದ್ದು ಅವರ ಅಸ್ತಿತ್ವಕ್ಕಾಗಿ ನಡೆಸಲಾಗುತ್ತಿರುವ ಹೋರಾಟಕ್ಕೆ ಡಾ. ಸುಬ್ರಮಣ್ಯನ್ ಸ್ವಾಮಿಯವರು ನೀಡುತ್ತಿರುವ ಬೆಂಬಲ ಶಕ್ತಿ ತುಂಬಿದೆ ಎಂದರು.

ಈ ಸಂದರ್ಭ ಡಾ. ಸುಬ್ರಮಣಿಯನ್ ಸ್ವಾಮಿ ಹಾಗೂ ಜಗದೀಶ್ ಶೆಟ್ಟಿ ಅವರಿಗೆ ಪೀಚೆಕತ್ತಿ ನೀಡುವ ಮೂಲಕ ಗೌರವಿಸಲಾಯಿತು.

ನಂದಿನೆರವಂಡ ನಿಶಾ ಅಚ್ಚಯ್ಯ ಪ್ರಾರ್ಥಿಸಿ, ಕಲಿಯಂಡ ಪ್ರಕಾಶ್ ಸ್ವಾಗತಿಸಿದರು. ಬಾಚರಣಿಯಂಡ ಚಿಪ್ಪಣ್ಣ ಕಾರ್ಯಕ್ರಮ ನಿರೂಪಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು.

ಡಾ. ಸುಬ್ರಮಣಿಯನ್ ಸ್ವಾಮಿ ಅವರಿಗೆ ಝಡ್ ಭದ್ರತೆ ಇರುವದರಿಂದ ಶಸ್ತ್ರಧಾರಿಗಳಾದ ಸಿಆರ್‍ಪಿಎಫ್‍ನ ಸಿಬ್ಬಂದಿಗಳು ವೇದಿಕೆಯ ಇಕ್ಕೆಲದಲ್ಲೂ ಕಂಡುಬಂದರು. ಕುಪ್ಯಚೇಲೆ ಧರಿಸಿ ಕಾರ್ಯಕ್ರಮದಲ್ಲಿ ನಗುಮುಖದಿಂದಿದ್ದ ಸುಬ್ರಮಣಿಯನ್ ಸ್ವಾಮಿ ಅವರು ಘೋಟೋಸೆಷನ್‍ನಲ್ಲೂ ಭಾಗಿಯಾದರಲ್ಲದೆ ಹಲವರ ಸೆಲ್ಫಿಗೂ ಫೋಜ್ ನೀಡಿದರು. ಮಡಿಕೇರಿ ಡಿವೈಎಸ್‍ಪಿ ಸುಂದರ್‍ರಾಜ್ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸರು ಕರ್ತವ್ಯ ನಿರ್ವಹಿಸಿದರು.

ಉಚಿತವಾಗಿ ಕಾಫಿ ವಿತರಣೆ

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕೊಡಗು ವಿಮೆನ್ಸ್ ಕಾಫಿ ಗ್ರೋವರ್ಸ್ ವಿಂಗ್‍ನವರು ಉಚಿತವಾಗಿ ಕಾಫಿ ವಿತರಿಸಿದರು. ತಂಡದ ಕೆಲವು ಸದಸ್ಯರು ಮುಖ್ಯ ಅತಿಥಿಗಳಿಗೆ ವೇದಿಕೆಗೆ ತೆರಳಿ ಕಾಫಿ ನೀಡಿದರು. ಡಾ. ಸ್ವಾಮಿ ಅವರು ಎರಡು ಮೂರು ಬಾರಿ ಕಾಫಿ ಸೇವನೆ ಮಾಡಿ ಕೊಡಗಿನ ಕಾಫಿಯ ಸ್ವಾದ ಅನುಭವಿಸಿದರು.

ಸೇನಾಧಿಕಾರಿಗಳು ಭಾಗಿ

ಇಂದಿನ ಕಾರ್ಯಕ್ರಮದಲ್ಲಿ ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ, ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ಸೇರಿದಂತೆ ಹಲವು ಕೊಡವ ಸಮಾಜದ ಅಧ್ಯಕ್ಷರು ಪಾಲ್ಗೊಂಡಿದ್ದರು.

ಮಡಿಕೇರಿ ಕೊಡವ ಸಮಾಜದಿಂದ ಪ್ರಾರ್ಥನೆ

ಕಾರ್ಯಕ್ರಮಕ್ಕೆ ಮುನ್ನ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ನೇತೃತ್ವದಲ್ಲಿ ದೇವರನ್ನು, ಹಿರಿಯರನ್ನು ಸ್ತುತಿಸಿ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.