ಸಿದ್ದಾಪುರ, ನ. 26: ಭಿನ್ನಾಭಿ ಪ್ರಾಯಗಳನ್ನು ಬಿಟ್ಟು ಕಾರ್ಯ ಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಕರೆ ನೀಡಿದರು.

ಚೆನ್ನಯ್ಯನಕೋಟೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲಪಿಸುವ ಕೆಲಸದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಬೇಕೆಂದರು. ಅಲ್ಲದೇ ಜವಾಬ್ದಾರಿ ವಹಿಸಿಕೊಂಡು ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸದ ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು. ಮುಂದಿನ ತಿಂಗಳು ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

ಮಾಜಿ ಎಂ.ಎಲ್.ಸಿ. ಹಾಗೂ ಕೆ.ಪಿ.ಸಿ.ಸಿ. ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ರಾಜ್ಯ ಉಸ್ತವಾರಿ ವಹಿಸಿಕೊಂಡಿರುವ ಸಂಸದ ಕೆ.ವಿ. ವೇಣುಗೋಪಾಲ್ ಅವರ ನಿರ್ದೇಶನ ದಂತೆ ರಾಜ್ಯಾದ್ಯಂತ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಭೂತಪೂರ್ವ ಯಶಸ್ಸು ಕಂಡಿದೆ ಎಂದರು.

ಮೋದಿ ನೇತೃತ್ವದ ಸರ್ಕಾರ ನೋಟು ಬದಲಾವಣೆ ಮಾಡುವ ಮೂಲಕ ದಿನಬಳಕೆಯ ವಸ್ತುಗಳ ದರವು ಗಗನಕ್ಕೆ ಏರಿದೆ ಎಂದು ಆರೋಪಿಸಿದರು. ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಸಲಾಂ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಬಡವರು ಸೇರಿದಂತೆ ಮಧ್ಯಮ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದರು. ಸಭೆಯಲ್ಲಿ ಹಿಂದುಳಿದ ವರ್ಗದ ಅಧ್ಯಕ್ಷ ಸರಾ ಚಂಗಪ್ಪ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್, ಸಿ.ಎ. ಹಂಸ, ಇತರರು ಮಾತನಾ ಡಿದರು. ಕಾರ್ಯ ಕ್ರಮದಲ್ಲಿ ಜಿ.ಪಂ. ಸದಸ್ಯೆ ಲೀಲಾವತಿ, ತಾ.ಪಂ. ಸದಸ್ಯೆ ಕಾವೇರಮ್ಮ, ಗ್ರಾ.ಪಂ. ಸದಸ್ಯರುಗಳಾದ ರಾಶೀದ್, ಉಮೇಶ್, ಮುತ್ತಪ್ಪ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಶರಣು ಪೂಣಚ್ಚ, ಉಸ್ಮಾನ್ ಹಾಜಿ, ರೆಜಿತ್ ಕುಮಾರ್, ಟಾಟು ಮೊಣ್ಣಪ್ಪ, ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ಕಾವೇರಮ್ಮ, ಬ್ಲಾಕ್ ಉಪಾಧ್ಯಕ್ಷ ಹನೀಫ್ ಹಾಗೂ ಮೊಹಮ್ಮದ್ ರಾಫಿ, ಪರಮೇಶ್ ಇತರರು ಹಾಜರಿದ್ದರು. ಸಭೆಯ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್ ಸೋಮಯ್ಯ ವಹಿಸಿದ್ದರು. ಬ್ಲಾಕ್ ಕಾರ್ಯದರ್ಶಿ ಜಾನ್ಸನ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಕೆಲವು ಜೆ.ಡಿ.ಎಸ್. ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.