ಸೋಮವಾರಪೇಟೆ, ನ.26: ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸುವದರೊಂದಿಗೆ ಅದರಲ್ಲಿ ಉಲ್ಲೇಖಗೊಂಡಿರುವ ಕರ್ತವ್ಯವನ್ನೂ ನಿಭಾಯಿಸಬೇಕು ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಅಭಿಪ್ರಾಯಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಕಚೇರಿ ಇವುಗಳ ಆಶ್ರಯದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ-ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಕ್ಕುಗಳನ್ನು ಚಲಾಯಿಸಿ ಸೌಲಭ್ಯ ಪಡೆಯುವದು ಮಾತ್ರವಲ್ಲ;ಕರ್ತವ್ಯವನ್ನು ನಿಭಾಯಿಸುವ ಜವಾಬ್ದಾರಿಯೂ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದು ನೆನಪಿಸಿದ ನ್ಯಾಯಾಧೀಶರು, ದೇಶದ ಸಂವಿಧಾನದಲ್ಲೇ ಜಾತ್ಯಾತೀತ ರಾಷ್ಟ್ರ ಎಂಬ ಅಂಶವಿದ್ದರೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಇಂದಿಗೂ ಬೇರೂರಿದೆ. ಇದು ಸಾಮಾಜಿಕ ಅಸ್ಪøಶ್ಯತೆಗೂ ಕಾರಣವಾಗಿದ್ದು, ಸಂವಿಧಾನದ ಮೂಲಕ ದೇಶದಲ್ಲೇ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಬಸವಣ್ಣನವರ ತತ್ವಗಳಂತೆ ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಇದು ಸಂವಿಧಾನದ ಮೂಲಕವೇ ಜಾರಿಯಾಗಬೇಕು. ಸಾಮಾಜಿಕ ಸಮಾನತೆ ಮತ್ತು ಐಕ್ಯತೆಗೆ ಜಾತಿ ವ್ಯವಸ್ಥೆ ತೊಡಕಾಗಿದ್ದು, ಅಸ್ಪøಶ್ಯತೆಗೆ ಅವಕಾಶ ನೀಡುತ್ತಿದೆ ಎಂದು ಪರಶುರಾಮ್ ಅವರು ವಿಷಾದ ವ್ಯಕ್ತಪಡಿಸಿದರು.

ಸಂವಿಧಾನ ನಿರ್ಮಾತೃ ಡಾ. ಬಿ.ಆರ್. ಅಂಬೇಡ್ಕರ್ ಅವರ ಚರಿತ್ರೆಯನ್ನು ಎಲ್ಲರೂ ಓದಬೇಕು. ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಪಡೆಯಬೇಕು. ಕಲ್ಯಾಣ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಪ್ರಾಕೃತಿಕ ಸಂಪತ್ತಿನ ರಕ್ಷಣೆಯಾಗಬೇಕು. ಸಂವಿಧಾನದ ಉನ್ನತ ಧ್ಯೇಯ, ಆಶೋತ್ತರಗಳನ್ನು ಎತ್ತಿಹಿಡಿಯುವ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಪಣ ತೊಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ-ಕಾನೂನು ಅರಿವು ಕಾರ್ಯಕ್ರಮಕ್ಕೆ ತಾಲೂಕು ಕಚೇರಿಯ ಯಾವೊಬ್ಬ ಸಿಬ್ಬಂದಿಯೂ ಆಗಮಿಸದೇ ಇರುವ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಗರಂ ಆದರು. ಸಂವಿಧಾನದ ಮಹತ್ವವನ್ನು ತಮ್ಮ ಸುದೀರ್ಘ ಭಾಷಣದಲ್ಲಿ ತಿಳಿಸುತ್ತಿದ್ದ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಅವರು, ಸಂವಿಧಾನದಿಂದಲೇ ತಾನು ಈ ಹಂತಕ್ಕೆ ತಲುಪಿದ್ದು ಎಂದು ಹೇಳಿದರು. ಈ ಸಂದರ್ಭ ಕಚೇರಿ ಸಿಬ್ಬಂದಿಗಳ ಗೈರಿನತ್ತ ಬೊಟ್ಟು ಮಾಡಿದ ಅವರು, ತಾಲೂಕು ಕಚೇರಿಯ ಸಿಬ್ಬಂದಿಗಳಿಗೆ ಕಾರ್ಯಕ್ರಮದ ಮಾಹಿತಿ ಇದ್ದು, ಕಚೇರಿಯಲ್ಲೇ ಆಯೋಜಿಸಲಾಗಿರುವ ಸಂವಿಧಾನ ದಿನಾಚರಣೆಗೆ ಬಾರದಿರುವದು ವೈಚಿತ್ರ್ಯಕ್ಕೆ ಸಾಕ್ಷಿ. ಗೈರು ಹಾಜರಾದ ಸಿಬ್ಬಂದಿಗಳಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಿ ಎಂದು ತಾಲೂಕು ತಹಶೀಲ್ದಾರ್ ಮಹೇಶ್ ಅವರಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ 8 ವಿದ್ಯಾರ್ಥಿಗಳು ಮತ್ತು ಮೆಟ್ರಿಕ್ ಪೂರ್ವ ವಸತಿ ನಿಲಯದ 11 ವಿದ್ಯಾರ್ಥಿನಿಯರು, ತಾಲೂಕು ಕಚೇರಿಯ ಓರ್ವ ಸಿಬ್ಬಂದಿ ಮಾತ್ರ ಭಾಗವಹಿಸಿದ್ದರು.ಭಾಗವಹಿಸಿದ್ದ ಸಿವಿಲ್ ನ್ಯಾಯಾಧೀಶರಾದ ಶ್ಯಾಂಪ್ರಕಾಶ್ ಮಾತನಾಡಿ, ಸಂವಿಧಾನದ ವಿವಿಧ ಪರಿಚ್ಛೇಧಗಳು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಒದಗಿಸಿದರಲ್ಲದೆ, ಸಂವಿಧಾನದ ಅಂಶಗಳ ಸಾಮಾನ್ಯ ಜ್ಞಾನವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ತಹಶೀಲ್ದಾರ್ ಮಹೇಶ್ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳು ಒಂದೇಶ ನಾಣ್ಯದ ಎರಡು ಮುಖಗಳಾಗಿದ್ದು, ಪ್ರತಿಯೊಬ್ಬರೂ ಸಂವಿಧಾನಕ್ಕೆ ಅನುಗುಣವಾಗಿ ಜೀವಿಸಬೇಕು ಎಂದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ ಮೇಲ್ವಿಚಾರಕಿ ರಮಾವತಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವಸತಿ ನಿಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.