ಶ್ರೀಮಂಗಲ, ನ. 26: ಪೊನ್ನಂಪೇಟೆ ತಾಲೂಕು ಪುನರಚನೆಗೆ ಅಗ್ರಹಿಸಿ ನಾಗರಿಕಾ ಹೊರಾಟ ಸಮಿತಿಯ ವತಿಯಿಂದ ಪೊನ್ನಂಪೇಟೆಯ ಗಾಂಧಿ ಪ್ರತಿಮೆಯ ಎದುರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಪೊನ್ನಂಪೇಟೆ ಕಲ್ಲುಕೊರೆ ನಿವಾಸಿಗಳು ಮತ್ತು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಕೈಕೇರಿ ಗೋಣಿಕೊಪ್ಪ ಇದರ ಸದಸ್ಯರು ಭಾಗವಹಿಸುವದರ ಮೂಲಕ ಪ್ರತಿಭಟನಗೆ ಬೆಂಬಲವನ್ನು ವ್ಯಕ್ತಪಡಿಸಿದರು.
ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಪೊನ್ನಂಪೇಟೆ ಹೋರಾಟಕ್ಕೆ ಮುನ್ನುಡಿ ಬರೆದಂತ ಪ್ರದೇಶ, ಪೊನ್ನಂಪೇಟೆ ತಾಲೂಕು ರಚನೆಗೆ ಹಲವು ವರ್ಷದಿಂದ ಬೇಡಿಕೆ ಇಟ್ಟು ಹೋರಾಟ ನಡೆಯುತ್ತಿದೆ. ಆದರೆ, ಯಾವ ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ಜನರ ಇಚ್ಚಾಶಕ್ತಿ ಇದ್ದರೆ ಸರಕಾರವನ್ನು ಮಣಿಸಬಹುದು ಎಂದರು.
ಮುಂದಿನ ಹೊರಾಟದ ರೂಪು ರೇಷೆÉಯನ್ನು ಸಿದ್ಧಪಡಿಸುವಾಗ ಸಂಘಟನೆಯ ಮುಖಾಂತರ ಅಗತ್ಯ ಸಲಹೆ ಸೂಚನೆಯನ್ನು ನೀಡಲಾಗುವದಲ್ಲದೆ ಸಂಪೂರ್ಣ ಸಹಕಾರವನ್ನು ನೀಡಲಾಗುವದು ಎಂದು ತಿಳಿಸಿದರು.
ಮಚ್ಚಾಮಾಡ ಅನಿಶ್ ಮಾದಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದನ್ನು ಪಡೆದುಕೊಳ್ಳಲೂ ಹೋರಾಟ ಮಾಡುವ ಅನಿವಾರ್ಯತೆ ನಮಗೆ ಬಂದಿರುವದು ದುಖಃಕರ ವಿಷಯ. ಹೋರಾಟದ ಬಗ್ಗೆಗಿನ ಚಿಂತನೆ ಹಾಗೂ ಉದ್ದೇಶವನ್ನು ನಮ್ಮ ಸ್ವಂತ ಬುದ್ದಿಯಲ್ಲಿ ಮಾಡುವಂತಾಗ ಬೇಕು. ಇತರರ ಆದೇಶಕ್ಕೆ ಹೊರಾಟ ಮಾಡಬಾರದು ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ಚೊಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ, ಕಳೆದ 26 ದಿನಗಳಿಂದ ತಾಲೂಕಿಗಾಗಿ ಹೋರಾಟ ನಡೆಸಿದರೂ ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಮಾತನಾಡಬೇಕು. ಶಾಂತಿಯುತ ಹೋರಾಟಕ್ಕೆ ಸರಕಾರ ಬೆಂಬಲವನ್ನು ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರರೂಪದ ಹೋರಾಟವನ್ನು ನಡೆಸಬೇಕು. ಇದಕ್ಕೆ ಮಹಿಳಾ ಸಂಘಟನೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಸಲಹೆಯಿತ್ತರು.
ಕಳ್ಳಿಂಚಡ ರಾಬೀನ್ ಸುಬ್ಬಯ್ಯ ಮಾತನಾಡಿ, ಇಂದಲ್ಲ ನಾಳೆ ಪೊನ್ನಂಪೇಟೆ ತಾಲೂಕು ರಚನೆ ಶತಸಿದ್ದ. ಇದಕ್ಕೆ ರಾಜಕೀಯ ರಹಿತವಾಗಿ ಪ್ರತಿಭಟನೆಯನ್ನು ಮಾಡಬೇಕಾಗಿದೆ ಎಂದರು.
ಈ ಸಂದರ್ಭ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಕೈಕೇರಿ-ಗೋಣಿಕೊಪ್ಪ ಇದರ ಪರವಾಗಿ ಪ್ರಭಾಕರ್ ನೆಲ್ಲಿತಾಯ ಬೆಂಬಲವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಲ್ಲುಕೊರೆ ನಿವಾಸಿಗಳ ಪ್ರಮುಖರಾದ ವಸಂತ್, ರಾಜೀವ್, ನಾಗರಿಕ ವೇದಿಕೆಯ ಅಧ್ಯಕ್ಷ ಪೂಣಚ್ಚ ಹಾಗೂ ಸದಸ್ಯರು ಬ್ರಾಹ್ಮಣ ಸಂಘದ ಪುರೋಹಿತ್, ಯುಕೊ ಸಂಘಟÀನೆಯ ಪ್ರಮುಖರಾದ ಚೆಪ್ಪುಡಿರ ಸುಜು ಕರುಂಬಯ್ಯ, ಕಾಟಿಮಾಡ ಗಿರಿ, ನೆಲ್ಲಮಕ್ಕಡ ಮಾದಯ್ಯ, ಚಂಗುಲಂಡ ಸೂರಜ್, ಅಯ್ಯಪ್ಪ, ಜೀವನ್, ಉಮೇಶ್, ಬಿಪಿನ್ ಹೊರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವಿಂದ್ರ, ಕಾಳಿಮಾಡ ಮೋಟಯ್ಯ, ಮೂಕಳೆರ ಲಕ್ಷಣ, ಚೆಪ್ಪುಡಿರ ಪೊನ್ನಪ್ಪ ಮುಂತಾದವರು ಭಾಗವಹಿಸಿದ್ದರು.
ತಾ. 27 ರಂದು (ಇಂದು) ನಡೆಯುವ ಪ್ರತಿಭಟನೆಯಲ್ಲಿ ಬೆಕ್ಕೆಸೂಡ್ಲೂರು ಗ್ರಾಮಸ್ಥರು, ಬಸವೇಶ್ವರ ವಾಹನ ಮಾಲೀಕರ ಸಂಘ ಕಾನೂರು, ದುರ್ಗಾ ಪರಮೇಶ್ವರಿ ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಬೆಳ್ಳೂರು, ಗ್ರಾಮಸ್ಥರು, ಚೆಟ್ಟಂಗಡ ಕುಟುಂಬಸ್ಥರು ಟಿ. ಶೆಟ್ಟಿಗೇರಿ, ಬುಡಕಟ್ಟು ಕೃಷಿಕರ ಸಂಘ ಬ್ರಹ್ಮಗಿರಿಪುರ, ಧರ್ಮಸ್ಥಳ ಸಂಘ ಬೃಹ್ಮಗಿರಿ ಪುರ, ಬಲ್ಯಮುಂಡೂರು ಗ್ರಾಮಸ್ಥರು, ಕಿರುಗೂರು, ಕೋತೂರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.