ಗೋಣಿಕೊಪ್ಪ ವರದಿ, ನ. 26 : ಮಾನವರು ಹುತ್ತಕ್ಕೆ ಹಾಲು, ಸಕ್ಕರೆ ಹಾಕುವದರಿಂದ ಇರುವೆಗಳು ಹುತ್ತದಲ್ಲಿರುವ ಹಾವುಗಳನ್ನು ಕಚ್ಚುವುದರಿಂದ ಹಾವಿನ ಪ್ರಾಣಕ್ಕೆ ಸಂಚಕಾರವಾಗುತ್ತದೆ ಎಂಬದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು ಎಂದು ಉರಗ ಪ್ರೇಮಿ ಶರತ್ ಹೇಳಿದರು.
ಪೊನ್ನಪ್ಪಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಾವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹಾವುಗಳನ್ನು ಕಂಡಾಗ ಹೊಡೆದು ಸಾಯಿಸಲು ಮುಂದಾಗಬಾರದು. ಉರಗ ಪ್ರೇಮಿಗಳ ಮೂಲಕ ಅರಣ್ಯಕ್ಕೆ ಬಿಡುವ ಕೆಲಸಕ್ಕೆ ಮುಂದಾಗಬೇಕು. ಹುತ್ತಕ್ಕೆ ಹಾಲು, ಸಕ್ಕರೆ ಹಾಕುವದರಿಂದ ಇರುವೆಗಳು ಹುತ್ತದಲ್ಲಿರುವ ಹಾವುಗಳಿಗೆ ಕಚ್ಚಿ ಕೊಲ್ಲುವ ಅಪಾಯವಿದೆ. ಇದರಿಂದಾಗಿ ಇಂತಹ ನಂಬಿಕೆಯಿಂದ ಹೊರ ಬರಬೇಕು ಎಂದರು.
ತಮ್ಮ ಸಹ ಉರಗ ಪ್ರೇಮಿಗಳಾದ ಭಾವೆ, ನವೀನ್, ಆಂಟೋಣಿ, ಸಂತೋಷ್ ಹಾಗೂ ಸರ್ಫು ಸಹಕಾರದಿಂದ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಹಾವುಗಳನ್ನು ಪ್ರದರ್ಶಿಸಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಕಲಾವಿದ ಕೆ.ಜಿ. ಸುಬ್ಬಯ್ಯ, ನಿವೃತ್ತ ಶಿಕ್ಷಕ ಆದೇಂಗಡ ಎಸ್. ಅಯ್ಯಪ್ಪ, ಕಾಫಿ ಬೆಳೆಗಾರರ ಆದೇಂಗಡ ಟಿ. ಸುಬ್ಬಯ್ಯ, ಪಿ.ಡಿ.ಒ. ಎಸ್.ಬಿ. ಮನ್‍ಮೋಹನ್, ಧರ್ಮಸ್ಥಳ ಸಂಘದ ಅಧ್ಯಕ್ಷ ಕೆ. ಬಿ. ಬಿಂದು, ಸೇವಾ ಯೋಜನಾಧಿಕಾರಿ ಎಸ್. ಆರ್. ತಿರುಮಲಯ್ಯ ಉಪಸ್ಥಿತರಿದ್ದರು.