ಗೋಣಿಕೊಪ್ಪ, ನ. 27: ಪೊನ್ನಂಪೇಟೆ ತಾಲೂಕು ರಚನೆಗೆ ಒತ್ತಾಯಿಸಿ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೊನ್ನಂಪೇಟೆ ತಾಲೂಕು ರಚನೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಪ್ರಸ್ತಾಪಿಸಿದರು.

ಇದಕ್ಕೆ ಪೂರಕವಾಗಿ ಸದಸ್ಯರು ಒಮ್ಮತ್ತದ ತೀರ್ಮಾನಕ್ಕೆ ಬಂದು ನಿರ್ಣಯವನ್ನು ಸರಕಾರಕ್ಕೆ ಸಲ್ಲಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.

ವೀರಾಜಪೇಟೆ ಮಿನಿ ವಿಧಾನಸೌಧಕ್ಕೆ ಪೊನ್ನಂಪೇಟೆಯ ಕೆಲವು ಇಲಾಖೆಗಳು ಸ್ಥಳಾಂತರ ಗೊಳ್ಳುವದನ್ನು ತಪ್ಪಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಇದೇ ಸಂದರ್ಭ ಆಗ್ರಹಿಸಿದರು. ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳು ಸ್ಥಳಾಂತರಗೊಂಡರೆ ಈ ಭಾಗದ ಬಿರುನಾಣಿ, ಕುಟ್ಟ, ಶ್ರೀಮಂಗಲ, ಬಿ.ಶೆಟ್ಟಿಗೇರಿ ಸೇರಿದಂತೆ ಹಲವು ಗ್ರಾಮದ ಜನರಿಗೆ ಸಮಸ್ಯೆಯಾಗಲಿದೆ. ಪೊನ್ನಂಪೇಟೆಯಿಂದ 21 ಕಿ.ಮೀ. ಪ್ರಯಾಣಿಸಿ ತಮ್ಮ ಕೆಲಸ ಕಾರ್ಯವನ್ನು ಮಾಡಿಸಬೇಕಾಗುತ್ತದೆ. ಇದರಿಂದ ಒಂದು ದಿನ ವ್ಯರ್ಥವಾಗಲಿದೆ. ಕೂಲಿ ಕಾರ್ಮಿಕರಿಗೆ ಇದು ದೊಡ್ಡ ಹೊಡೆತ ಬೀಳಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಮದ್ಯವರ್ತಿಗಳಿಂದ ದಂಧೆ ನಡೆಯುತ್ತಿದೆ. ಇದರಿಂದ ಜನರ ಕೆಲಸಗಳು ಸರಾಗವಾಗಿ ನಡೆಯುತ್ತಿಲ್ಲ. ತಹಶೀಲ್ದಾರ್ ಅಧಿಕಾರಕ್ಕಿಂತ ಇಲಾಖೆಯಲ್ಲಿನ ಕೆಲವು ಸಿಬ್ಬಂದಿಗಳ ದರ್ಬಾರ್ ಹೆಚ್ಚಾಗಿದೆ. ಪಡಿತರ ಚೀಟಿ, ಹಕ್ಕುಪತ್ರ ವಿತರಣೆಗಳಲ್ಲಿ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಆರೋಪಿಸಿದರು.

ಟಿಪ್ಪು ಜಯಂತಿಯಂದು ನಡೆದ ಸಭೆಯನ್ನು ಸಭೆಯ ಅಧ್ಯಕ್ಷರಾಗಿದ್ದ ಶಾಸಕರೇ ಬಹಿಷ್ಕರಿಸಿ ಹೊರನಡೆದರೂ ಬಲವಂತವಾಗಿ ಶಿಷ್ಟಾಚಾರ ಉಲ್ಲಂಘಿಸಿ ಸಭೆ ನಡೆಸಿದ್ದರ ಬಗ್ಗೆ ತಹಶೀಲ್ದಾರ್ ಅವರಲ್ಲಿ ನೆಲ್ಲಿರ ಚಲನ್ ಕುಮಾರ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಲು ಮುಂದಾದ ತಹಶೀಲ್ದಾರ್ ಸರ್ಕಾರದ ನಿರ್ದೇಶನ ಮೇಲೆ ಸಭೆ ನಡೆಸಿದ್ದೇವೆ ಎಂದು ನುಣುಚಿಕೊಳ್ಳುವ ಪ್ರಯತ್ನ ನಡೆಸಿ, ಈ ಬಗ್ಗೆ ಏನನ್ನು ಹೇಳಲಾರೆ ಎಂದು ಹೇಳಿದರು.

ಆಹಾರ ಇಲಾಖೆಯು ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದೆ. ತಾಲೂಕಿನ ಬಹುತೇಕ ನ್ಯಾಯ ಬೆಲೆ ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಾಗಿ ಪಡಿತರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಭೆಯಲ್ಲಿ ಆರೋಪಗಳು ಕೇಳಿ ಬಂದವು.

ಇದಕ್ಕೆ ಸಮರ್ಥಿಸಿ ಮಾತನಾಡಿದ ತಾ.ಪಂ. ಸದಸ್ಯೆ ಚೆನ್ನಮ್ಮ ನಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲೂ ಈ ರೀತಿ ಸುಲಿಗೆ ಮಾಡುತ್ತಾ ಬಡವರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಪೊನ್ನಂಪೇಟೆ, ಗೋಣಿಕೊಪ್ಪ, ವೀರಾಜಪೇಟೆ ಸೇರಿದಂತೆ ಹಲವು ಭಾಗಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಈ ರೀತಿ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೆ ಉತ್ತರ ನೀಡಿದ ದಂಡಾಧಿಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ವಂಚಿಸುತ್ತಿರುವದು ಕಂಡುಬಂದರೆ ನೇರವಾಗಿ ನಮಗೆ ದೂರು ನೀಡಿ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಗಿರಿಜನ ಸಂಚಾರಿ ಆರೋಗ್ಯ ಘಟಕದ ವೈದ್ಯಾಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಗಿರಿಜನರ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡದೆ ತಮ್ಮ ಖಾಸಗಿ ಆರೋಗ್ಯ ಕೇಂದ್ರದಲ್ಲಿ ನಿತ್ಯ ಕರ್ತವ್ಯ ನಿರತರಾಗಿರುತ್ತಾರೆ. ಇವರ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಾಲೂಕು ವೈದ್ಯಾಧಿಕಾರಿ ಯತಿರಾಜ್ ಅವರಿಗೆ ಸಭೆ ಸೂಚಿಸಿತು.

ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಅರಣ್ಯ, ನೀರಾವರಿ, ಆಹಾರ, ಚೆಸ್ಕಾ, ಸಹಕಾರ, ಪಶುಸಂಗೋಪನೆ ಇಲಾಖೆಗಳು ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ.ಗಣೇಶ್, ತಾ.ಪಂ ಸದಸ್ಯರುಗಳಾದ ಪ್ರಶಾಂತ್ ಉತ್ತಪ್ಪ, ಪಿ.ಎಂ. ಪೂಣಚ್ಚ, ಜಯಾ ಪೂವಯ್ಯ, ಯರವರ ಪ್ರಕಾಶ್, ರಾಜು, ಕಾವೇರಮ್ಮ, ಸುಮಾ, ಆಶಾ ಜೇಮ್ಸ್, ಮೂಕಳೇರ ಆಶಾ ಪೂಣಚ್ಚ, ಸುನಿತಾ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಚಂದ್ರಶೇಖರ್, ಚೆಸ್ಕಾಂ ಇಂಜಿನಿಯರ್ ಅಂಕಯ್ಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.