ಸೋಮವಾರಪೇಟೆ, ನ.27: ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಮಿತಿಮೀರಿರುವ ಮಧ್ಯವರ್ತಿಗಳ ದರ್ಬಾರಿಗೆ ಕಡಿವಾಣ ಹಾಕಿ ಆಡಳಿತವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲು ತಾಲೂಕು ತಹಶೀಲ್ದಾರ್ ಮಹೇಶ್ ಮುಂದಾಗಿದ್ದಾರೆ.

ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್ ಮಹೇಶ್ ಅವರ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಮಧ್ಯವರ್ತಿಗಳ ಹಾವಳಿಯ ಬಗ್ಗೆ ಚರ್ಚೆ ನಡೆಯಿತು. ಸರ್ಕಾರದ ಕೆಲಸಗಳಿಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು- ಸಿಬ್ಬಂದಿಗಳಿದ್ದು, ಮಧ್ಯವರ್ತಿಗಳ ಅವಶ್ಯಕತೆಯಿಲ್ಲ. ಇಂತಹವರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಮಹೇಶ್ ತಿಳಿಸಿದರು.

ಸರ್ಕಾರಿ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳು ಹಣ ಪಡೆಯುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಹೇಶ್ ತಮ್ಮ ಕಚೇರಿಯಲ್ಲೇ ವಿವಿಧ ಅಧಿಕಾರಿಗಳು-ಸಿಬ್ಬಂದಿಗಳ ಸಭೆ ನಡೆಸಿದರು.

ಸರ್ಕಾರಿ ಕೆಲಸಕ್ಕೆ ಮಧ್ಯವರ್ತಿಗಳು ಹಣ ಪಡೆಯುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದ್ದು, ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರನ್ನು ಇವರುಗಳು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ತಾಲೂಕು ಕಚೇರಿಯ ಮೇಲೆ ಸಂಶಯಗಳು ಮೂಡುವಂತಾಗಿದೆ. ಇಂತಹ ಕ್ರಮಕ್ಕೆ ಮುಂದಿನ ದಿನಗಳಲ್ಲಿ ಆಸ್ಪದ ನೀಡುವದಿಲ್ಲ ಎಂದು ತಹಶೀಲ್ದಾರ್ ‘ಶಕ್ತಿ’ಗೆ ಭರವಸೆ ನೀಡಿದರು.

ತಾಲೂಕು ಕಚೇರಿಗೆ ಅಳವಡಿಸಿರುವ ಸಿ.ಸಿ. ಕ್ಯಾಮೆರಾವನ್ನು ಚಾಲೂ ಸ್ಥಿತಿಯಲ್ಲಿ ಇಡಲಾಗಿದೆ. ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯ ಫಲಕವನ್ನು ಕಚೇರಿಯಲ್ಲಿ ಅಳವಡಿಸಲಾಗುವದು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳ ಬಳಿ ತೆರಳದೇ ನೇರವಾಗಿ ತಾಲೂಕು ಕಚೇರಿಗೆ ಆಗಮಿಸಬೇಕು. ಕಚೇರಿ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ತಕ್ಷಣ ಗಮನಕ್ಕೆ ತರಬೇಕು ಎಂದು ಮಹೇಶ್ ಅವರು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.

ಕಚೇರಿಯ ಮುಂಭಾಗ ಕೆಟ್ಟು ನಿಂತಿರುವ ದೀಪವನ್ನು ದುರಸ್ತಿಗೊಳಿಸಲಾಗುವದು. ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತರಲಾಗುವದು. ತಾಲೂಕು ಕಚೇರಿಯ ಹೆಸರನ್ನು ಕೆಡಿಸಲು ಯತ್ನಿಸುವ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲಾಗುವದು ಎಂದು ಭರವಸೆಯಿತ್ತಿದ್ದಾರೆ.

ತಾಲೂಕು ಕಚೇರಿಗೆ ಆಗಮಿಸುವ ಬ್ರೋಕರ್‍ಗಳಿಗೆ ಯಾವದೇ ಕಾರಣಕ್ಕೂ ಮಣೆ ಹಾಕಬಾರದು. ಬೇರೆಯವರ ದಾಖಲೆಗಳನ್ನು ತಂದರೆ ತಮ್ಮ ಗಮನಕ್ಕೆ ತರಬೇಕು ಎಂದು ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ದಿನಂಪ್ರತಿ ಕಚೇರಿಗೆ ನಾಲ್ಕೈದು ಮಂದಿ ಬ್ರೋಕರ್‍ಗಳು ಬರುತ್ತಿರುವದು ಗಮನಕ್ಕೆ ಬಂದಿದೆ. ಕೆಲವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಮುಂದೆಯೂ ಇಂತಹವರು ಆಗಮಿಸಿದರೆ ವೀಡಿಯೋ ಚಿತ್ರೀಕರಣ ಮಾಡಿ ಪೊಲೀಸ್ ದೂರು ನೀಡಲಾಗುವದು ಎಂದು ಕಂದಾಯ ನಿರೀಕ್ಷಕ ಡಿ.ಎನ್. ವಿನು ಹೇಳಿದರು.

ಒಟ್ಟಾರೆ ಕಳೆದ ಅನೇಕ ವರ್ಷಗಳಿಂದ ಮಧ್ಯವರ್ತಿಗಳ ಹಾವಳಿಯಿಂದ ತುಂಬಿದ್ದ ತಾಲೂಕು ಕಚೇರಿಯ ಗ್ರಹಣ ಬಿಡಿಸಲು ತಹಶೀಲ್ದಾರ್ ಮುಂದಾಗಿದ್ದು, ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.