ಕುಶಾಲನಗರ, ನ. 27: ಶ್ರೇಷ್ಠ ರಫ್ತುದಾರಿಕೆಗೆ ರಾಜ್ಯ ಸರಕಾರ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಕುಶಾಲನಗರದ ಎಸ್‍ಎಲ್‍ಎನ್ ಸಂಸ್ಥೆ ಭಾಜನವಾಗಿದೆ ಸ್ಥಳೀಯ ಪರ್ಪಲ್ ಪಾಲ್ಮ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‍ಎಲ್‍ಎನ್ ವಿಶ್ವನಾಥನ್, 2015-16ನೇ ಸಾಲಿನಲ್ಲಿ ಎಸ್‍ಎಲ್‍ಎನ್ ಸಂಸ್ಥೆ 2113 ಮೆಟ್ರಿಕ್ ಟನ್ ಇನ್ಸ್‍ಟೆಂಟ್ ಕಾಫಿ ಪುಡಿ ಹಾಗೂ 12871 ಮೆಟ್ರಿಕ್ ಟನ್ ಕಾಫಿ ಬೀಜವನ್ನು ಪ್ರಪಂಚದ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿದೆ. ಅಲ್ಲದೆ ಈ ರಫ್ತು ವಹಿವಾಟಿನ ಮೂಲಕ ದೇಶಕ್ಕೆ 3,79,16,923 ಅಮೇರಿಕನ್ ಡಾಲರ್ ವಿದೇಶ ವಿನಿಮಯ ಗಳಿಸಿಕೊಟ್ಟಿದೆ. 2014-15ನೇ ಸಾಲಿಗೆ ಹೋಲಿಸಿದಲ್ಲಿ ಸಂಸ್ಥೆ ರಫ್ತು ವಹಿವಾಟಿನಲ್ಲಿ 2015-16ನೇ ಸಾಲಿನಲ್ಲಿ ಶೇ. 58.36 ರಷ್ಟು ಬೆಳವಣಿಗೆ ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಬಿಐಇಸಿ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕ ಬಿ.ಕೆ. ವಿಜಯ ಕುಮಾರ್, ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಶಬ್ಬೀರ್ ಬಾಷ ಇದ್ದರು.