ಮಡಿಕೇರಿ, ನ.27 :ಅಶಾಂತಿಯ ವಾತಾವರಣದ ಈ ದಿನಗಳಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಘ, ಸಂಸ್ಥೆಗಳ ಪಾತ್ರ್ರ ಪ್ರಮುಖವಾಗಿದೆ ಎಂದು ಡಿವೈಎಸ್‍ಪಿ ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ.ವೀರನಾಡು ರಕ್ಷಣಾ ವೇದಿಕೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವದೇ ಸಂಘಟನೆಗಳು ಸಾಮಾಜಿಕ ಕಳಕಳಿಯನ್ನು ಮರೆಯುವದರೊಂದಿಗೆ ನಿಸ್ವಾರ್ಥ ಸೇವೆಗೆ ಸಿದ್ಧವಾಗಿರಬೇಕು. ಜಡ್ಡು ಗಟ್ಟಿದ ವಾತಾವರಣಕ್ಕೆ ಸ್ಫೂರ್ತಿ ತುಂಬುವ ಮತ್ತು ಯುವ ಸಮೂಹವನ್ನು ಹೆಚ್ಚು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘ, ಸಂಸ್ಥೆಗಳ ಮೇಲೆ ಇದೆ ಎಂದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ಪರವಾದ ಆಚರಣೆಗಳಿಂದ ನಮ್ಮ ನಾಡಿನ ಮೇಲಿನ ಅಭಿಮಾನವನ್ನು ಹೆಚ್ಚಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.

ಕೊಡಗು ಚಾನಲ್ ದೃಶ್ಯವಾಹಿನಿಯ ಸಂಪಾದಕ ಜಿ.ವಿ.ರವಿಕುಮಾರ್ ಮಾತನಾಡಿ, ವೀರನಾಡು ರಕ್ಷಣಾ ವೇದಿಕೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಗಳನ್ನು ರೂಪಿಸಬೇಕು. ಜನಪರ ಹೋರಾಟಗಳಿಂದ ಜನಪ್ರಿಯತೆ ಹೆಚ್ಚುವದಲ್ಲದೆ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯನ್ನೂ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಲೆಕ್ಕ ಪರಿಶೋಧಕ ಬಿ.ಹೆಚ್.ಹನೀಫ್ ಮಾತನಾಡಿ, ಮೂಲಭೂತ ಸೌಲಭ್ಯಗಳ ಕೊರತೆ ಎದುರಾದಾಗ ಸಂಘಟನೆಗಳು ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಮೂಲಕ ಜನಪರ ಕಾಳಜಿಯನ್ನು ತೋರಬೇಕೆಂದು ಹೇಳಿದರು. ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ ಕೊಡಗಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ರಕ್ತದಾನ, ನೇತ್ರದಾನ, ದೇಹದಾನದಂತಹ ಮಹತ್ಕಾರ್ಯದಲ್ಲೂ ಪಾಲ್ಗೊಳ್ಳುವದಾಗಿ ತಿಳಿಸಿದರು.

ಪದಾಧಿಕಾರಿ ಮಿನಾಜ್ ಪ್ರವೀಣ್ ಕಾರ್ಯಕ್ರಮವನ್ನು ನಿರೂಪಿಸಿದರು, ವೀರಾಜಪೇಟೆ ತಾಲೂಕು ಅಧ್ಯಕ್ಷ ಜನಾರ್ಧನ್ ವಂದಿಸಿದರು. ಇದೇ ಸಂದರ್ಭ ಡಿವೈಎಸ್‍ಪಿ ಸುಂದರರಾಜ್ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತ್ತಲ್ಲದೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.