ಗೋಣಿಕೊಪ್ಪ ವರದಿ, ನ. 28 : ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ರಾಜ್ಯಮಟ್ಟದ ಅಂತರ್ ಕಾಲೇಜು ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು, ವೀರಾಜಪೇಟೆ ಕಾವೇರಿ ಕಾಲೇಜು, ಮಡಿಕೇರಿ ಎಫ್‍ಎಂಸಿ ಹಾಗೂ ವಿರಾಜಪೇಟೆ ಸೆಂಟ್ ಆನ್ಸ್ ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆದಿವೆ.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಮಂಗಳೂರು, ಮೈಸೂರು ವಿಶ್ವವಿದ್ಯಾಲಯ ಮಟ್ಟದ 21 ವರ್ಷದೊಳಗಿನ ಬಾಲಕರ ಹಾಕಿ ಟೂರ್ನಿಯಲ್ಲಿ ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಮಡಿಕೇರಿ ಫೀ. ಮಾ. ಕಾರ್ಯಪ್ಪ ಕಾಲೇಜು ತಂಡವು ವಿದ್ಯಾವಿಕಾಸ ತಂಡದ ವಿರುದ್ಧ 4-1 ಗೋಲುಗಳ ಗೆಲುವು ದಾಖಲಿಸಿತು. ವಿಜೇತ ತಂಡದ ಪರವಾಗಿ ಸುದೀಶ್ 19, 24 ಹಾಗೂ 31 ನೇ ನಿಮಿಷಗಳಲ್ಲಿ 3 ಗೋಲು, 34 ನೇ ನಿಮಿಷದಲ್ಲಿ ಪೂವಣ್ಣ 1 ಗೋಲು, ವಿಕಾಸ ಪರ 13ರಲ್ಲಿ ಗಗನ್ 1 ಗೋಲು ಹೊಡೆದರು.

ದ್ವಿತೀಯ ಕ್ವಾರ್ಟರ್ ಫೈನಲ್‍ನಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡವು ಮೂರ್ನಾಡು ಎಫ್‍ಜಿಸಿ ತಂಡವನ್ನು ಶೂಟೌಟ್‍ನಲ್ಲಿ 4-3 ಗೋಲುಗಳಿಂದ ಸೋಲಿಸಿತು. ಸೆಂಟ್ ಆನ್ಸ್ ಪರ ಅನುಪ್, ಪ್ರಜ್ವಲ್, ಚಂದನ್, ಸುಗಂದ, ಮೂರ್ನಾಡು ಪರ ಪ್ರಜ್ವಲ್, ಪುನೀತ್, ಭವಿನ್ ಗೋಲು ಹೊಡೆದರು.

ತೃತೀಯ ಕ್ವಾರ್ಟರ್ ಫೈನಲ್‍ನಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಸೀನಿಯರ್ ತಂಡವು ಶನಿವಾರಸಂತೆ ಎಫ್‍ಜಿಸಿ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಮಣಿಸಿತು. ಕಾವೇರಿ ಕಾಲೇಜು ಪರ 3ರಲ್ಲಿ ಬೋಪಣ್ಣ, 11, 17ರಲ್ಲಿ ವಿಘ್ನೇಶ್, 13 ರಲ್ಲಿ ಮಧು ಗೋಲು ಹೊಡೆದರು.

ನಾಲ್ಕನೇ ಕ್ವಾರ್ಟರ್ ಫೈನಲ್‍ನಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ತಂಡವು ಪೊನ್ನಂಪೇಟೆ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ವೀರಾಜಪೇಟೆ ಪರ 8, 16ನೇ ನಿಮಿಷಗಳಲ್ಲಿ ಬೋಪಣ್ಣ, 10 ನೇ ನಿಮಿಷದಲ್ಲಿ ಬಿಪಿನ್, 26 ನಿಮಿಷದಲ್ಲಿ ಸುದರ್ಶನ್, ಸಿಐಟಿ ಪರ 29 ನಿಮಿಷದಲ್ಲಿ ಗುಣೀಶ್ ಗೋಲು ಹೊಡೆದರು. ವೀರಾಜಪೇಟೆ ಕಾವೇರಿ ಕಾಲೇಜು ತಂಡವು ರಾಜರಾಜೇಶ್ವರಿ ವಿರುದ್ಧ 3-0 ಗೋಲುಗಳ ಗೆಲುವು ದಾಖಲಿಸಿತು. ವಿಜೇತ ತಂಡದ ಪರ 7 ನಿಮಿಷದಲ್ಲಿ ಬೋಪಣ್ಣ, 16 ನಿಮಿಷದಲ್ಲಿ ಮದನ್, 14 ನಿಮಿಷದಲ್ಲಿ ಪೊನ್ನಣ್ಣ ತಲಾ ಒಂದೊಂದು ಗೋಲು ಬಾರಿಸಿದರು.

ಗೋಣಿಕೊಪ್ಪ ಲಯನ್ಸ್ ಹಾಗೂ ಸೆಂಟ್ ಫಿಲೋಮಿನಾಸ್ ತಂಡಗಳು ಗೈರಾಗುವ ಮೂಲಕ ನಿರಾಸೆ ಮೂಡಿಸಿದವು.