ಗೋಣಿಕೊಪ್ಪ ವರದಿ, ನ. 28: ಕೊಡವ ಕೌಟುಂಬಿಕ ಹಾಕಿ, ಕ್ರಿಕೆಟ್ ಟೂರ್ನಿಗಳ ಯಶಸ್ವಿಯ ನಡುವೆ ಕೊಡವ ಸಮಾಜಗಳ ನಡುವೆ ಲೆದರ್‍ಬಾಲ್ ಕ್ರಿಕೆಟ್ ಟೂರ್ನಿ ನಡೆಸುವ ಮೂಲಕ ಕ್ರಿಕೆಟ್ ಪ್ರತಿಭೆಗಳನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸುವ ಚಿಂತನೆ ಅನಾವರಣಕ್ಕೆ ಕೂರ್ಗ್ ಕ್ರಿಕೆಟ್ ಅಕಾಡೆಮಿ ಮುಂದಾಗಿದೆ.

ಕೊಡವ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ನಡೆಸುವ ಚಿಂತನೆಯಂತೆ ಪೂರ್ವ ಭಾವಿ ಸಭೆ ನಡೆಸುವ ಮೂಲಕ ಆರಂಭಿಕ ಪ್ರಯತ್ನಕ್ಕೆ ಮುಂದಾಗಿದೆ.

ಹಾಕಿ ಕೂರ್ಗ್ ಮುಖ್ಯಸ್ಥ ಮಾಚಿಮಂಡ ಕುಮಾರ್ ಅಪ್ಪಚ್ಚು, ಉಪಾಧ್ಯಕ್ಷ ಚೇರಂಡ ಕಿಶನ್ ಇವರುಗಳು ಕೊಡವ ಸಮಾಜ ಒಕ್ಕೂಟದೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮನವಿ ಮಾಡಿಕೊಂಡಿದ್ದಾರೆ.

ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಪದಾಧಿಕಾರಿಗಳು ಈಗಾಗಲೇ ಸಭೆ ನಡೆಸಿ ಮುಂದಿನ ರೂಪುರೇಷೆ ರಚನೆಗೆ ಮುಂದಾಗಿದ್ದಾರೆ. ಕೊಡವ ಸಮಾಜ ಒಕ್ಕೂಟ ಈ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡರೆ ಈ ವರ್ಷದಿಂದಲೇ ಟೂರ್ನಿ ನಡೆಸುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು, ಮೈಸೂರು, ಹೊರ ಜಿಲ್ಲೆ ಹಾಗೂ ಕೊಡಗಿನಲ್ಲಿರುವ ಕೊಡವ ಸಮಾಜಗಳ ತಂಡಗಳನ್ನು ಆಹ್ವಾನಿಸಿ ಟೂರ್ನಿ ಆಯೋಜಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪ್ರತೀ ತಂಡಕ್ಕೆ ಅವರದ್ದೇ ಗ್ರಾಮದ ಆಟಗಾರರನ್ನು ಸೇರಿಸಿ ಆಟವಾಡಲು ಅವಕಾಶ ನೀಡುವ ಚಿಂತನೆ ಇದೆ.

ಟ್ವೆಂಟಿ, ಟ್ವೆಂಟಿ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ದಕ್ಷಿಣ ಕೊಡಗಿನಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆ ಇದೆ. ಮೊದಲ ಬಾರಿಗೆ ಲೆದರ್‍ಬಾಲ್ ಕ್ರಿಕೆಟ್ ನಡೆಯುವ ಆಶಾಭಾವನೆ ಇದೆ.

ಲೆದರ್‍ಬಾಲ್ ಕ್ರಿಕೆಟ್‍ಗೆ ಉತ್ತಮ ಗುಣಮಟ್ಟದ ಕಿಟ್ ಅವಶ್ಯಕತೆ ಇದೆ. ಇದು ಕೊಡವ ಸಮಾಜಗಳಿಗೆ ಹೊರೆಯಾದರೆ ಕೂರ್ಗ್ ಕ್ರಿಕೆಟ್ ಅಕಾಡೆಮಿ ಆಟಗಾರರನ್ನು ಪ್ರೋತ್ಸಾಹಿಸಲು ಕಿಟ್ ವಿತರಿಸುವ ಅವಕಾಶ ನೀಡುವದು ಕೂಡ ಅಕಾಡೆಮಿಯ ಚಿಂತನೆಯಲ್ಲಿದೆ.

ಕೊಡಗಿನಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳಿದ್ದರೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಿದ್ದಾರೆ. ಲೆದರ್‍ಬಾಲ್‍ನಲ್ಲಿ ಟೂರ್ನಿ ನಡೆದಷ್ಟು ಉತ್ತಮ ಕ್ರೀಡಾಪಟುವನ್ನು ಬೆಳೆಸಲು ಅವಕಾಶವಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಾಚಿಮಂಡ ಕುಮಾರ್ ಅಪ್ಪಚ್ಚು, ಚೇರಂಡ ಕಿಶನ್ ಭವಿಷ್ಯದಲ್ಲಿ ಗುಣಮಟ್ಟದ ಕ್ರಿಕೆಟ್ ಪಟು ಕೊಡಗು ಜಿಲ್ಲೆಯಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು. ಮಹಾ ನಗರಗಳಿಂದ ಹೆಚ್ಚು ಪ್ರತಿಭೆಗಳು ಹೊರ ಬರುತ್ತಿದ್ದಾರೆ. ಗ್ರಾಮೀಣ ಮಟ್ಟದ ಪ್ರತಿಭೆ ಪ್ರೋತ್ಸಾಹಿಸಲು ಚಿಂತನೆ ನಡೆದಿದೆ. ಇದರಂತೆ ಕೊಡವ ಸಮಾಜಗಳ ನಡುವೆ ಟೂರ್ನಿ ಆಯೋಜಿಸುವ ಚಿಂತನೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.