ಶ್ರೀಮಂಗಲ, ನ. 28 : ಕನ್ನಡ ಸಾಹಿತ್ಯ ಪರಿಷತ್ ಶ್ರೀಮಂಗಲ ಹೋಬಳಿ ಘಟಕ, ಬಿರುನಾಣಿ ಗ್ರಾಮ ಪಂಚಾಯಿತಿ, ಬಿರುನಾಣಿ ಮಹಿಳಾ ಸಮಾಜ, ಮರೆನಾಡ್ ಕೊಡವ ಸಮಾಜ ಹಾಗೂ ಬಿರುನಾಣಿ ಸರಕಾರಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಅಂಗವಾಗಿ ತಾ. 30ರ ಗುರುವಾರದಂದು ಪೂರ್ವಾಹ್ನ 10 ಗಂಟೆಗೆ ಬಿರುನಾಣಿ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಗರಿಷ್ಠ 6 ವಿದ್ಯಾರ್ಥಿಗಳನ್ನೊಳಗೊಂಡ ಜಾನಪದ ನೃತ್ಯ ತಂಡವು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಮರೆನಾಡ್ ಪ್ರೌಢಶಾಲೆ, ಟಿ.ಶೆಟ್ಟಿಗೇರಿಯ ಎಂ.ಎಂ.ಸರಕಾರಿ ಪ್ರೌಢಶಾಲೆ, ರೂಟ್ಸ್ ಪ್ರೌಢಶಾಲೆ, ಹುದಿಕೇರಿಯ ಜನತಾ ಪ್ರೌಢಶಾಲೆ, ಶ್ರೀಮಂಗಲ ಜೂನಿಯರ್ ಕಾಲೇಜಿನ ಪ್ರೌಢಶಾಲೆ, ಜೆ.ಸಿ ಪ್ರೌಢಶಾಲೆ, ಕುಟ್ಟ ಸರಕಾರಿ ಪ್ರೌಢಶಾಲೆ ಹಾಗೂ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳ ತಲಾ ಒಂದು ತಂಡವು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರಶಂಸನಾ ಪತ್ರ, ಕಿರು ಕಾಣಿಕೆಯೊಂದಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವದು.

ಕ.ಸಾ.ಪ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ.ಸಾ.ಪ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಬಿರುನಾಣಿ ಮಹಿಳಾ ಸಮಾಜದ ಅಧ್ಯಕ್ಷೆ ಬುಟ್ಟಿಯಂಡ ಲೀನಾ ಭೀಮಯ್ಯ, ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ ಹಾಗೂ ಬಿರುನಾಣಿ ಸರಕಾರಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಹೆಚ್.ಅರ್. ತುಳಸಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರ ಮೂಲಕ ಪ್ರೋತ್ಸಾಹ ನೀಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡವು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9449764418ನ್ನು ಸಂಪರ್ಕಿಸಬೇಕಾಗಿ ಕನ್ನಡ ಸಾಹಿತ್ಯ ಪರಿಷತ್ ಶ್ರೀಮಂಗಲ ಹೋಬಳಿ ಘಟಕದ ಕಾರ್ಯದರ್ಶಿ ಬುಟ್ಟಿಯಂಡ ಸುನಿತಾ ಗಣಪತಿ ತಿಳಿಸಿದ್ದಾರೆ.