ಸಿದ್ದಾಪುರ, ಡಿ. 14: ವಾಲ್ನೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇ&divlusmn; ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವುಮಾದಪ್ಪ ರಾಜ್ಯದ ಜನರ ಸಮಸ್ಯೆಯನ್ನು ಆಲಿಸುವ ನಿಟ್ಟಿನಲ್ಲಿ ಹಾಗೂ ಪಕ್ಷವನ್ನು ಬಲ ಪಡಿಸುವ ಹಿನ್ನೆಲೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದು ಸಂಪೂರ್ಣ ಯಶಸ್ವಿ ಕಂಡಿದೆ ಎಂದರು. ಬಿ.ಜೆ.ಪಿ. ಪಕ್ಷದ ಜಿಲ್ಲೆಯ ಎರಡು ಶಾಸಕರುಗಳು ಅಧಿವೇಶನ ಸಂದರ್ಭದಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚಕಾರವೆತ್ತದೇ ಇದೀಗ ಭಾಗಮಂಡಲ ರಸ್ತೆ ದುರಸ್ತಿಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿರುವದು ಅಲ್ಲದೇ ಜನರನ್ನು ದಿಕ್ಕು ತಪ್ಪಿಸುತ್ತಿರುವದು ಹಾಸ್ಯಸ್ಪದವಾಗಿದೆ ಎಂದು ಟೀಕಿಸಿದರು. ಅಲ್ಲದೇ ಮುಖ್ಯಮಂತ್ರಿಗಳ ಅನುದಾನದಲ್ಲಿ ಜಿಲ್ಲೆಯ ಶಾಸಕರುಗಳು ಭೂಮಿ ಪೂಜೆ ನೆರೆವೇರಿಸುವ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪವನ್ನು ಮಾಡುತ್ತಿರುವದು ಖಂಡನೀಯ ಎಂದರು.

ಸೋಮವಾರಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ ಕಾಂಗ್ರೆಸ್ ಪಕ್ಷವು ಬಡವರ ಹಾಗೂ ರೈತರ ಪರ ಕೆಲಸ ಮಾಡುತ್ತಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ರೈತರ ಸಾಲವನ್ನು ಮನ್ನ ಮಾಡಿದೆ. ಅಲ್ಲದೇ ಬಡ ಜನತೆಗೆ ಉಚಿತ ಅಕ್ಕಿ ನೀಡುವ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದರು. ರಾಜ್ಯದ ಬಡ ಮಂದಿಯ ಮನೆಗಳಿಗೆ ಹಕ್ಕು ಪತ್ರವನ್ನು ವಿತರಿಸಿದ್ದಾರೆ. ಜಿಲ್ಲೆಯಲ್ಲಿ ಬಿ.ಜೆ.ಪಿ. ಶಾಸಕರು ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸದೆ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.

ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪನವರು ಮಾತನಾಡಿ ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇದನ್ನು ಸಹಿಸಲಾರದ ಬಿ.ಜೆ.ಪಿ. ಪಕ್ಷದವರು ಅಭಿವೃದ್ಧಿ ಕಾರ್ಯಗಳು ನಡೆಯದಂತೆ ಅಡ್ಡಿ ಪಡಿಸುತ್ತಿದ್ದಾರೆಂದು ಆರೋಪಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿ ಬೆಳೆಯುತ್ತಿದ್ದು ರಾಜ್ಯ ಸರ್ಕಾರವು ನುಡಿದಂತೆ ನಡೆದ ಸರ್ಕಾರವಾಗಿದ್ದು ರಾಜ್ಯದಲ್ಲಿ ಸ್ಥಿರ ಸರ್ಕಾರವನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್, ತಾ.ಪಂ. ಸದಸ್ಯರುಗಳಾದ ರವೀಂದ್ರ ಅಪ್ರು, ಸುಹಾದ, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಮಪ್ಪ, ರಜಾಕ್, ಕಾಂಗ್ರೆಸ್ ಮುಖಂಡರುಗಳಾದ ಉಸ್ಮನ್, ಜರ್ನಾಧನ, ಹೂವಯ್ಯ, ಲೋಕನಾಥ್, ಮಾದಪ್ಪ, ಎ.ಕೆ. ಹಕ್ಕಿಂ, ಇತರರು ಹಾಜರಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಭುವೇಂದ್ರ ಸ್ವಾಗತಿಸಿ ವಂದಿಸಿದರು.