ಶ್ರೀಮಂಗಲ, ಡಿ. 14: ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಶಾಸಕ ಅಭ್ಯರ್ಥಿಯಾಗಿ ಎಲ್ಲಾ ರಾಜಕೀಯ ಪಕ್ಷಗಳಿಂದ ಕೊಡವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕೆಂಬ ಪೊನ್ನಂಪೇಟೆ ಕೊಡವ ಸಮಾಜದ ನಿಲುವಿಗೆ ಅಖಿಲ ಅಮ್ಮಕೊಡವ ಸಮಾಜ ಸಹಮತ ವ್ಯಕ್ತಪಡಿಸುತ್ತದೆ ಎಂದು ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ 3 ವಿಧಾನಸಭಾ ಕ್ಷೇತ್ರವಾಗಿದ್ದ ಸಮಯದಲ್ಲಿ ಸುಮಾರು 6 ದಶಕಗಳ ಕಾಲ ವೀರಾಜಪೇಟೆ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗಿತ್ತು. ಈ ಸಂದರ್ಭ ಸುಮಾರು 60 ವರ್ಷಗಳಿಂದ ಕೊಡವ ಜನಾಂಗಕ್ಕೆ ಶಾಸಕರಾಗುವ ಅವಕಾಶ ದೊರೆಯಲಿಲ್ಲ. ಇದೀಗ 2008ರಿಂದ ಕ್ಷೇತ್ರ ಪುನರ್ ವಿಂಗಡನೆ ಆದ ನಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರ 2ಕ್ಕೆ ಇಳಿದಿದ್ದು, ಸಾಮಾನ್ಯ ಕ್ಷೇತ್ರವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಮಾರ್ಪಾಡಾಗಿದೆ. ಈ ಸಂದÀರ್ಭದಲ್ಲೂ ಸಹ ಕೊಡವರಿಗೆ ಎಲ್ಲಾ ರಾಜಕೀಯ ಪಕ್ಷದಿಂದ ಪ್ರಾತಿನಿಧ್ಯ ದೊರಕಿಲ್ಲ. ಆದ್ದರಿಂದ ಸ್ಥಳೀಯ ಜನರ ಭಾವನೆಗೆ, ಸಮಸ್ಯೆಗೆ ಹಾಗೂ ಈ ಕ್ಷೇತ್ರ ಹಿತಾಸಕ್ತಿಗೆ ಸ್ಪಂದಿಸುವಂತಹ ಅರ್ಹ ಕೊಡವ ಅಭ್ಯರ್ಥಿಗೆ ಎಲ್ಲಾ ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ಕಳೆದ ಹಲವು ದಶಕದಿಂದ ಕಾಡುತ್ತಿದೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ಪರಿಹರಿಸಲು ಅರ್ಹತೆ ಇರುವ ಕೊಡವ ಅಭ್ಯರ್ಥಿಗೆ ರಾಜಕೀಯ ಪಕ್ಷಗಳು ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ. ಕೊಡವರು ಹಾಗೂ ಅಮ್ಮಕೊಡವ ಜನಾಂಗ ಸಹೋದರರಂತೆ ಬದುಕುತಿದ್ದು, ವೀರಾಜಪೇಟೆ ಕ್ಷೇತ್ರದಿಂದ ಕೊಡವರು ಶಾಸಕ ಅಭ್ಯರ್ಥಿಯ ಬೇಡಿಕೆಗೆ ಬೆಂಬಲ ನೀಡುವದಾಗಿ ಬಾನಂಡ ಪ್ರಥ್ಯು ತಿಳಿಸಿದ್ದಾರೆ.