ವೀರಾಜಪೇಟೆ, ಡಿ. 14 : ಕೇಂದ್ರ ಹಾಗೂ ರಾಜ್ಯ ಸರಕಾರ ನಗರಗಳಲ್ಲಿ ಕ್ರೀಡಾಪಟುಗಳಿಗೆ ಮೂಲ ಸೌಲಭ್ಯ ಕಲ್ಪಿಸಿರುವಂತೆ ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳಿಗೂ ಸೌಲಭ್ಯಗಳನ್ನು ಕಲ್ಪಿಸಿದರೆ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ. ಇದಕ್ಕೆ ಸರಕಾರಗಳು ತಕ್ಷಣ ಚಿಂತಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ನವಜ್ಯೋತಿ ಯುವಕ ಸಂಘದಿಂದ ಇಲ್ಲಿನ ತಾಲೂಕು ಮೈದಾನದಲ್ಲಿ 28ನೇ ವರ್ಷದ ವಾರ್ಷಿಕೋತ್ಸವ ಹಾಗೂ ದ್ವಿತೀಯ ವರ್ಷದ ಕಾಲ್ಚೆಂಡು ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಬಿಜೆಪಿ ವಕ್ತಾರ ಟಿ.ಪಿ. ಕೃಷ್ಣ ಮಾತನಾಡಿ, ವೀರಾಜಪೇಟೆಯಲ್ಲಿ ಪಂದ್ಯಾಟಗಳನ್ನು ಆಯೋಜಿಸುವ ತಂಡಗಳಿಗೆ ಪಟ್ಟಣದಲ್ಲಿ ಒಂದು ಸುಸಜ್ಜಿತ ಮೈದಾನದ ಅವಶ್ಯಕತೆ ಇದೆ. ಈ ಬೇಡಿಕೆಯನ್ನು ಜನ ಪ್ರತಿನಿಧಿಗಳು ಈಡೇರಿಸುವಂತಾಗಬೇಕು ಎಂದರು.

ಸಭೆಯನ್ನುದ್ದೇಶಿಸಿ ಡಿ.ಪಿ. ರಾಜೇಶ್ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಸಿ.ಜನಾರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಅಮ್ಮತ್ತಿಯ ಸಂಜು, ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್.ಮತೀನ್, ಪಿ.ಎ.ದಿನೇಶ್, ಬಿಜೆಪಿ. ನಗರ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ, ಹಿಂದೂ ಮಲೆಯಾಳಿ ಅಸೋಸಿಯೇಶನ್‍ನ ಅಧ್ಯಕ್ಷ ಕೆ.ಬಿ.ಹರ್ಷವರ್ಧನ್, ಮರ್ವೀನ್ ಲೋಬೋ, ಶೀಬಾ ಪೃಥ್ವಿನಾಥ್ ಉಪಸ್ಥಿತರಿದ್ದರು.

ಚಾಮುಂಡಿ ಫುಟ್‍ಬಾಲ್ ತಂಡಕ್ಕೆ ಟ್ರೋಫಿ

ಅಂತಿಮ ಪಂದ್ಯಾಟವು ಅಮ್ಮತ್ತಿ ಮಿಲನ್ ಬಾಯ್ಸ್ ಹಾಗೂ ಅಮ್ಮತ್ತಿ ಒಂಟಿಯಂಗಡಿಯ ಚಾಮುಂಡಿ ಫುಟ್‍ಬಾಲ್ ಕ್ಲಬ್ ತಂಡಗಳ ನಡುವೆ ನಡೆದು ಚಾಮುಂಡಿ ತಂಡ 0-1 ಗೋಲುಗಳಿಂದ ಗೆದ್ದಿತು.

ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಪಿ.ದಿನೇಶ್ ನಾಯರ್ ಅವರು ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಶೇಷಪ್ಪ ಹಾಗೂ ಶೀನ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಉಪನ್ಯಾಸಕ ಚಾಲ್ರ್ಸ್ ಡಿಸೋಜ ನಿರೂಪಿಸಿ, ನಿರ್ದೇಶಕ ಜೂಡಿವಾಜ್ ಸ್ವಾಗತಿಸಿದರು.

ಸಂಘದ ಉಪಾಧ್ಯಕ್ಷ ಎಂ.ಎಂ.ಮುನ್ನಾ, ಪ್ರಧಾನ ಕಾರ್ಯದರ್ಶಿ ರವಿ, ಕೋಶಾಧಿಕಾರಿ ಸುನೀಲ್ ಇತರ ನಿರ್ದೇಶಕರುಗಳು ಕಾರ್ಯ ನಿರ್ವಹಿಸಿದರು.