ಮಡಿಕೇರಿ, ಡಿ. 14: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿಶೇಷ ಕಾಳಜಿ ವಹಿಸಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮಂದಿ ಸುಳ್ಳು ಆರೋಪ ಗಳನ್ನು ಮಾಡುತ್ತಿದ್ದು, ಸುಳ್ಳುಗಾರರಿಂದ ಕಾಂಗ್ರೆಸ್ ಪಕ್ಷ ಶಿಷ್ಟಾಚಾರದ ಪಾಠ ಕಲಿಯಬೇಕಾಗಿಲ್ಲ ವೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‍ಗೆ ಆಯ್ಕೆಯಾಗಿರುವ ವೀಣಾಅಚ್ಚಯ್ಯ ಅವರ ಕಾರ್ಯ ವ್ಯಾಪ್ತಿ ಕರ್ನಾಟಕ ರಾಜ್ಯ ಮಟ್ಟಕ್ಕಿದೆ. 30 ಜಿಲ್ಲೆಗಳಲ್ಲಿ 177 ತಾಲೂಕುಗಳು 6068 ಗ್ರಾಮ ಪಂಚಾಯಿತಿಗಳು ಕೂಡ ಇವರ ವ್ಯಾಪ್ತಿಗೆ ಬರುತ್ತದೆ. ಇದರ ಅರಿವು ಬಿಜೆಪಿ ಮಂದಿಗೆ ಇಲ್ಲವೆಂದು ಟೀಕಿಸಿದರು. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ಎಲ್ಲೂ ಶಿಷ್ಠಾಚಾರದ ಉಲ್ಲಂಘನೆಯಾಗಿಲ್ಲ.

ಪ್ಯಾಕೇಜ್ ಅನುದಾನದ ಕಾಮಗಾರಿಯ ಪಟ್ಟಿಯನ್ನು ವಲಯ ಕಾಂಗೆÀ್ರಸ್, ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಮನವಿ ಮೇರೆಗೆ ಎಂಎಲ್‍ಸಿ ವೀಣಾಅಚ್ಚಯ್ಯ ಅವರು ತಯಾರಿಸಿದ್ದು, ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ಗ್ರಾಮಸ್ಥರು ಇವರ ಉಪಸ್ಥಿತಿಯನ್ನು ಬಯಸುವದು ಸಹಜವೆಂದು ಸಮರ್ಥಿಸಿಕೊಂಡರು.

ಜಿಲ್ಲೆಯ 3 ತಾಲೂಕುಗಳಿಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಸಂಯೋಜಕರನ್ನು ನೇಮಕ ಮಾಡಲಾಗಿದೆ. ವೀರಾಜಪೇಟೆ ಪೊಯ್ಲೆಂಗಡ ಪಲ್ವಿನ್ ಪೂಣಚ್ಚ, ಮಡಿಕೇರಿ ಕುಂಬುಗೌಡನ ಪ್ರಸನ್ನ ಹಾಗೂ ಸೋಮವಾರಪೇಟೆ ಬ್ಯಾಡಗೊಟ್ಟ ಹನೀಫ್ ರವರಿಗೆ ನೇಮಕಾತಿ ಪತ್ರ ನೀಡಲಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಈಗಾಗಲೇ ಜಿಲ್ಲಾ ಪಂಚಾಯತ್ ಕ್ಷೇತ್ರ ಸಂಘಟಕರಾಗಿ 29 ಕ್ಷೇತ್ರಗಳಿಗೆ ತಲಾ ಇಬ್ಬರಂತೆ 58 ಸಂಘಟಕರನ್ನು ನೇಮಕ ಮಾಡಲಾಗಿದ್ದು ಸುಮಾರು 70 ಕಡೆಗಳಲ್ಲಿ ಗ್ರಾಮ ಸಂವಾದಗಳನ್ನು ಯಶಸ್ವಿಗೊಳಿಸಲಾಗಿದೆ ಎಂದು ಮೈನಾ ಹೇಳಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಮಾತನಾಡಿ, ಬ್ಲಾಕ್‍ನ 122 ಬೂತ್ ಮಟ್ಟದಲ್ಲಿ ಶೇ.85 ರಷ್ಟು ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿದೆಯೆಂದು ಹರ್ಷ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನಡೆದ ಈ ಕಾರ್ಯಕ್ರಮ ಮತದಾರರ ನಡುವೆ ಬಾಂಧವ್ಯ ವೃದ್ಧಿಗೆ ಸಹಕಾರಿಯಾಯಿತು ಎಂದರು.

ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಲಾಗಿ ದೆಯೆಂದ ಮೊಣ್ಣಪ್ಪ, ಈ ಬಾರಿಯ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ ಎಂದರು.

ಪ್ರಮುಖ ಎಂ.ಎ.ಉಸ್ಮಾನ್ ಮಾತನಾಡಿ, ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಜಾತ್ಯತೀತ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕಡಗದಾಳು ಗ್ರಾಪಂ ಸದಸ್ಯ ಪಿಯೂಷ್ ಪೆರೇರ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಾಳಾಡಿ ಪ್ರತಾಪ್ ಉಪಸ್ಥಿತರಿದ್ದರು.