ಮಡಿಕೇರಿ, ಡಿ. 14: ಮಾದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಸ್ವಂತ ಮನೆ ಹೊಂದಿರುವವರಿಗೆ ಮತ್ತೆ ಮನೆಯನ್ನು ಮಂಜೂರು ಮಾಡಲು ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಮುಂದಾಗಿದ್ದು, ಈ ನಿಯಮ ಬಾಹಿರ ಕ್ರಮದ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಹೆಚ್.ಎಂ. ಸೋಮಪ್ಪ, ರಾಜಕೀಯ ಲಾಭಕ್ಕಾಗಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಸ್ವಜನ ಪಕ್ಷಪಾತ ಮಾಡುತ್ತಿದ್ದು, ಈಗಾಗÀಲೇ ಸ್ವಂತ ಮನೆÀ ಹೊಂದಿರುವ 10 ಮಂದಿಗೆ ಮನೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ವಸತಿ ಹಂಚಿಕೆ ವಿಚಾರದಲ್ಲಿ ಗ್ರಾಮ ಪಂಚಾಯಿತಿಯನ್ನು ಕಡೆಗಣಿಸಲಾಗಿದ್ದು, ಫಲಾನುಭವಿಗಳ ಆಯ್ಕೆ ಸಂದರ್ಭ ಪಂಚಾಯ್ತಿಯ ಗಮನ ಸೆಳೆÉದಿಲ್ಲ. ಅರ್ಹ ಫಲಾನುಭವಿಗಳಿಗೆ ವಸತಿ ನೀಡದೆ ಉಳ್ಳವರಿಗೆ ನೀಡುವದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ. ನಿಯಮ ಉಲ್ಲಂಘಿಸುತ್ತಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಮಪ್ಪ ಒತ್ತಾಯಿಸಿದರು.

ಕುಂಬೂರು ವ್ಯಾಪ್ತಿಯಲ್ಲಿ ನಡೆಯದ ಕಾಮಗಾರಿಗೆ ಬಿಲ್ ಪಾವತಿಸಲಾಗಿದೆಯೆಂದು ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, ಮಾಜಿ ಅಧ್ಯಕ್ಷರ ವಿರುದ್ಧವೇ 2013-14ರಲ್ಲಿ ಅನುದಾನ ದುರುಪಯೋಗ ಮಾಡಿದ ಆರೋಪವಿದೆ ಎಂದರು.

ಪಂಚಾಯಿತಿ ಅಧ್ಯಕ್ಷೆ ಲತಾ ನಾಗರಾಜ್ ಮಾತನಾಡಿ, ಅಧ್ಯಕ್ಷ ಸ್ಥಾನದಲ್ಲಿರುವ ತಾನು ದಲಿತ ಮಹಿಳೆ ಎನ್ನುವ ಕಾರಣಕ್ಕಾಗಿ ಮಾಜಿ ಅಧ್ಯಕ್ಷರು ಅವ್ಯವಹಾರದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಡೆಯದ ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಮಾಜಿ ಅಧ್ಯಕ್ಷರ ವರ್ತನೆ ಹೀಗೆ ಮುಂದುವರಿದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವದಾಗಿ ಎಚ್ಚರಿಕೆ ನೀಡಿದರು.

ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಅಂಬೇಡ್ಕರ್ ಹಾಗೂ ಇಂದಿರಾ ಆವಾಜ್ó ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಸೋಮವಾರಪೇಟೆ ತಾ. ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ. ವಸತಿ ಹಂಚಿಕೆ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ತಕ್ಷಣ ಇಒ ಅವರನ್ನು ಹಾಗೂ ಕಂಪ್ಯೂಟರ್ ಆಪರೇಟರ್‍ನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ತಾ.ಪಂ. ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿ ಕಿರುಕುಳದಿಂದ ಪಂಚಾಯ್ತಿಗೆ ಪಿಡಿಒಗಳು ಬರುತ್ತಿಲ್ಲವೆಂದು ಟೀಕಿಸಿದ ಅವರು ಅನೇಕ ದಿನಗಳಿಂದ ಪಿಡಿಒ ಹುದ್ದೆ ಖಾಲಿ ಇದ್ದು, ಖಾಯಂ ಪಿಡಿಒ ಒಬ್ಬರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.