*ಸಿದ್ದಾಪುರ, ಡಿ.14: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ವಾಲ್ನೂರು ವಾರ್ಡಿನ ಸಭೆಯು ಗ್ರಾ.ಪಂ ಸಭಾಂಗಣದಲ್ಲಿ ಸದಸ್ಯೆ ಹೆಚ್.ಎಂ ಕಮಲಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯ ದತ್ತ ವಿಜಯ ಮಾತನಾಡಿ, ಹಲವು ವರ್ಷಗಳ ಹಿಂದೆ ಅಮ್ಮಂಗಾಲ ದೇವಸ್ಥಾನದಿಂದ ಬಾಳೆಗುಂಡಿ ಗಿರಿಜನ ಕಾಲೋನಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವರೆಗೆ ಪೈಪ್ ಲೈನ್ ಅಳವಡಿಸಲಾಗಿತ್ತಾದರೂ, ಕಳೆದ 6 ತಿಂಗಳಿನಿಂದ ಪೈಪ್‍ಗಳು ಹಾನಿಯಾಗಿದ್ದು, ಕೂಡಲೇ ನೂತನ ಪೈಪ್‍ಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿದರು. ಸರಕಾರದ ವತಿಯಿಂದ ನೀಡುತ್ತಿರುವ ಎಲ್‍ಎಡಿ ಬಲ್ಬ್‍ಗಳು ಕುಶಾಲನಗರದ ಕೆಇಬಿ ಕಚೇರಿಯಲ್ಲಿ ವಿತರಿಸುತ್ತಿದ್ದು, ಇನ್ನೂ ಮುಂದಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾ.ಪಂ ಕಚೇರಿಯಲ್ಲೇ ವಿತರಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಸಲೀಂ, ಕವಿತಾ, ಪಿಡಿಓ ನಂಜುಂಡಸ್ವಾಮಿ ಇದ್ದರು.

ಸಭೆ ಬಹಿಷ್ಕಾರ

ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಯ ಜ್ಯೋತಿನಗರ ವಾರ್ಡಿನ ವಾರ್ಡ್ ಸಭೆಯು ಸದಸ್ಯೆ ಜಮೀಲ ಅಧ್ಯಕ್ಷತೆಯಲ್ಲಿ ಇಲ್ಲಿನ ಹಳೆಯ ಗ್ರಾ.ಪಂ ಕಟ್ಟಡದಲ್ಲಿ ಆಯೋಜಿಸಿತ್ತಾದರೂ ವಾರ್ಡ್ ಸದಸ್ಯ ಸತೀಶ ಹಾಗೂ ಪಿಡಿಓ ನಂಜುಂಡಸ್ವಾಮಿ ಮಾತ್ರ ಹಾಜರಾಗಿದ್ದು, ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿದ್ದಾರೆ.

ಜ್ಯೋತಿನಗರವು ದೇವರಕಾಡು ಪ್ರದೇಶವಾಗಿರುವದರಿಂದ ಯಾವದೇ ಕಾಮಗಾರಿ ನಡೆಸದಂತೆ ಬಸವಣ್ಣ ಭನ ಸಮಿತಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವದರಿಂದ ಕಳೆದ 6 ವರ್ಷಗಳಿಂದ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಸೇರಿದಂತೆ ಯಾವದೇ ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲ. ಇಲ್ಲಿನ ಜನರು ಮೂಲಭೂತ ಸಮಸ್ಯೆಯಿಂದ ಬಳಲುತ್ತಿದ್ದು, ಇಂದಿನ ಸಭೆಯನ್ನು ಬಹಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದ ಗ್ರಾಮಸ್ಥರು, ಮುಂದಿನ ವಿಧಾನಸಭಾ ಚುನಾವಣೆಯನ್ನು ಹಾಗೂ ರಾಜಕೀಯ ಪಕ್ಷಗಳ ಸಭೆಯನ್ನು ಬಹಿಷ್ಕರಿಸುವದಾಗಿ ತಿಳಿಸಿದ್ದಾರೆ.

-ಅಂಚೆಮನೆ ಸುಧಿ