ಮಡಿಕೇರಿ, ಡಿ. 15: ಇಡೀ ಪ್ರಪಂಚದಲ್ಲೇ ಕೊಡವರು ಅಪರೂಪದ ಜನಾಂಗವಾಗಿದ್ದು, ತಮ್ಮದೇ ಐತಿಹ್ಯವನ್ನು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಹತ್ತು ಹಲವಾರು ದಾಖಲೆಗಳೂ ಇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನೈಜ ಇತಿಹಾಸವನ್ನು ತಿರುಚಿ ಹಲವರು ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಕೆಲವು ಬರಹಗಾರರು ನಿಸ್ವಾರ್ಥಮನೋಭಾವದ ಕೊಡವರನ್ನು ಇತಿಹಾಸದ ನೆಪದಲ್ಲಿ ಅವಮಾನಿಸುವದು ಇಲ್ಲದ ವಿಚಾರಗಳನ್ನು ಪ್ರತಿಬಿಂಬಿಸುವ ಯತ್ನ ಮಾಡಿರುವದು, ಮಾಡುತ್ತಿರುವದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ಈಗಿನ ಪೀಳಿಗೆಗೆ ಹಿಂದಿನ ಇತಿಹಾಸದ ಅರಿವು ಇರಬೇಕು. ಹೀಗಿದ್ದಲ್ಲಿ ಮಾತ್ರ ಚರಿತ್ರೆ ತಿರುಚುವ ಪ್ರಯತ್ನಕ್ಕೆ ಸೂಕ್ತ ಉತ್ತರ ನೀಡಲು ಸಾಧ್ಯವಾಗುತ್ತದೆ ಎಂಬ ಅಂಶ ಇಂದು ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ಕೊಡಗಿನೊಡೆಯರು ಕೊಡವರು ಪುಸ್ತಕ ಸಂವಾದದಲ್ಲಿ ಚರ್ಚೆಗೊಳಪಟ್ಟಿತು.

ಕೊಡವ ಮಕ್ಕಡ ಕೂಡ ಹಾಗೂ ರಂಗಭೂಮಿ ಪ್ರತಿಷ್ಠಾನದ ವತಿಯಿಂದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ಹೊರ ತಂದಿರುವ ಕೊಡಗಿನೊಡೆಯರು ಕೊಡವರು ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪುಸ್ತಕ ರಚನೆಯ ಹಿನ್ನೆಲೆಯ ಕುರಿತು ಮಾತನಾಡಿದ ಕಾರ್ಯಪ್ಪ ಇತ್ತೀಚಿನ ವರ್ಷಗಳ ಬೆಳವಣಿಗೆಯ ಗಂಭೀರತೆ, ನೋವು, ಹತಾಶೆ ಈ ಪುಸ್ತಕ ಹೊರತರಲು ಪ್ರೇರಣೆಯಾಗಿದೆ. ಸರಕಾರದಿಂದ ಹಣ ಪಡೆದುಕೊಂಡು ಪಿ.ಎಚ್.ಡಿ. ಪಡೆಯಲು ಪುಸ್ತಕ ಪ್ರಕಟಿಸಿರುವ ಕೆಲವು ಬರಹಗಾರರು ಕೊಡವರ ಬಗ್ಗೆ ಟೀಕೆ ಮಾಡಿರುವದು, ಜನಾಂಗವನ್ನು ಅಪಮಾನ ಮಾಡಿರುವ ಉದಾಹರಣೆಗಳು ಇವೆ. ಈ ಎಲ್ಲಾ ಕಾರಣದಿಂದ ಕೊಡವರ ನೈಜ ಇತಿಹಾಸ ಏನಿದೆ, ಸತ್ಯಾಂಶವೇನು ಎಂಬದನ್ನು ಬೆಳಕಿಗೆ ತರಲು ಹಾಗೂ ಯುವ ಪೀಳಿಗೆಗೆ ಪರಿಚಯಿಸಲು ಈ ಪುಸ್ತಕ ಹೊರ ತಂದಿರುವದಾಗಿ ಹೇಳಿದರು. ಪುಸ್ತಕದ ಕುರಿತು ಮಾತನಾಡಿದ ಬಿಜೆಪಿ ಪ್ರಮುಖ ಮಾಚಿಮಾಡ ಎಂ. ರವೀಂದ್ರ ಅವರು 1807ರಿಂದ 2012ರ ತನಕದ ಪ್ರಖ್ಯಾತ ಲೇಖಕರ ಪುಸ್ತಕದಲ್ಲಿ ಇರುವ ದಾಖಲೆಗಳನ್ನು ಆಧಾರವಾಗಿ ತೆಗೆದುಕೊಂಡಿದ್ದು, ಎಲ್ಲದಕ್ಕೂ ಉತ್ತರ ಪುಸ್ತಕದಲ್ಲಿದೆ ಎಂದರು.

ಮಡಿಕೇರಿ ಕೊಡವ ಸಮಾಜ ಮಾಜಿ ಉಪಾಧ್ಯಕ್ಷ ಮಂಡೇಪಂಡ ರತನ್ ಕುಟ್ಟಯ್ಯ ಮಾತನಾಡಿ, ಕೊಡವ ಜನಾಂಗ ಈ ಪರಿಸ್ಥಿತಿ ಎದುರಿಸಲು ಇದು ಜನಾಂಗದವರ ದೌರ್ಬಲ್ಯವೇ, ಜನಾಂಗದ ಮೇಲಿನ ಅಸೂಯೆಯೇ ಅಥವಾ ನಮ್ಮತನವನ್ನು ನಾವೇ ಬಿಟ್ಟು ಕೊಡುತ್ತಿದ್ದೇವೆಯೇ ಎಂಬದರ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ. ಈ ಹಿಂದಿನಂತೆ ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ನಿರ್ವಹಿಸಿ, ಅದನ್ನು ಪಾಲಿಸಿದಲ್ಲಿ ಯಾವದೇ ಸಮಸ್ಯೆ ಉದ್ಭವಿಸದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಜನಾಂಗದವರು ತಮ್ಮ ಈ ಹಿಂದಿನ ಐತಿಹ್ಯವನ್ನು ಉಳಿಸಿಕೊಳ್ಳಲು ಒಗ್ಗಟ್ಟಿನಿಂದ ಮುಂದಡಿಯಿಡಬೇಕಿದೆ ಎಂದರು. ಜನಾಂಗದ ಬಗ್ಗೆ ಅವಹೇಳನ ಮಾಡಿ ಯಾರಾದರೂ ಇತಿಹಾಸ ತಿರುಚಿ ಪುಸ್ತಕ ಹೊರ ತಂದಲ್ಲಿ ಸರಕಾರಿ ಸಂಸ್ಥೆಯಾಗಿರುವ ಕೊಡವ ಅಕಾಡೆಮಿಯ ಮೂಲಕ ಅದನ್ನು ಪ್ರಶ್ನಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಇತಿಹಾಸದ ಅರಿವಿದ್ದರೆ ಟೀಕಾಕಾರರಿಗೆ ಉತ್ತರ ನೀಡಲು ಸಾಧ್ಯವಿದೆ ಎಂದರು. ಗಾಯಕ ಚೆಕ್ಕೇರ ಪಂಚಮ್ ತ್ಯಾಗರಾಜ್, ಶಕ್ತಿ ಸಂಪಾದಕರಾಗಿದ್ದ ದಿ. ಜಿ. ಯದುಮಣಿ ವಿರಚಿತ ನಂಗ ಕೊಡವಂಗ ಕೊಡಗ್‍ರೊಡೆಯಂಗ ಗೀತೆಯನ್ನು ಹಾಡಿದರು. ಬೊಳ್ಳಜೀರ ಅಯ್ಯಪ್ಪ ಸ್ವಾಗತಿಸಿ, ಬಾಳೆಯಡ ದಿವ್ಯ ನಿರೂಪಿಸಿ, ವಂದಿಸಿದರು.