ಮಡಿಕೇರಿ, ಡಿ. 15: ಇಲ್ಲಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಇಂದು ಮತ್ತು ನಾಳೆ (ತಾ.16) ಕೊಡಗು ಗೃಹರಕ್ಷಕ ದಳ ಸಿಬ್ಬಂದಿಗೆ ಎರಡು ದಿನದ ಕ್ರೀಡಾಕೂಟ ಏರ್ಪಡಿಸಲಾಗಿದೆ. ಸಸಿಗೆ ನೀರು ಹಾಕುವ ಮೂಲಕ ಗೃಹ ರಕ್ಷಕದಳ ಕಮಾಂಡೆಂಟ್ ಹಾಗೂ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಹಾಗೂ ಹಿಂದುಳಿದ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸುರೇಶ್ ಅವರು ಕ್ರೀಡೆಯು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲಿದ್ದು, ಮನುಷ್ಯನ ನಿರಂತರ ಚಟುವಟಿಕೆಗೆ ಸಹಕಾರಿ ಎಂದು ತಿಳಿಹೇಳಿದರು. ಅಧ್ಯಕ್ಷತೆಯಿಂದ ಮಾತನಾಡಿದ ಡಿವೈಎಸ್ಪಿ, ಸದಾ ಪೊಲೀಸ್ ಇಲಾಖೆಯೊಂದಿಗೆ ಸಮಾಜದ ಸವಾಲುಗಳನ್ನು ನಿಭಾಯಿಸಲು ಕೈಜೋಡಿಸುವ ಗೃಹ ರಕ್ಷಕ ಸಿಬ್ಬಂದಿ, ಕ್ರೀಡೆಯಿಂದ ಹೊಸ ಸ್ಫೂರ್ತಿಯೊಂದಿಗೆ ಮುನ್ನಡೆಯಲು ಸಹಕಾರಿ ಆಗಲಿ ಎಂದು ಆಶಿಸಿದರು.

ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಐ.ಪಿ. ಮೇದಪ್ಪ ಹಾಗೂ ಮಹೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಮಹಿಳಾ ಸಿಬ್ಬಂದಿ ರಮ್ಯಾ ಹಾಗೂ ಪೂವಮ್ಮ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಪುರುಷ ಹಾಗೂ ಮಹಿಳಾ ಗೃಹ ರಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ತಾ. 16ರಂದು (ಇಂದು) ಅಪರಾಹ್ನ 3 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.