ಭಾಗಮಂಡಲ, ಡಿ. 15: ಪಶ್ಚಿಮಘಟ್ಟ ಉಳಿಸಿ ಪಾದ ಯಾತ್ರೆಯ ಮೂವತ್ತನೇ ವರ್ಷಾಚರಣೆಯ ಜನಜಾಗೃತಿ ಅಭಿಯಾನದ ಅಂಗವಾಗಿ ತಲಕಾವೇರಿಯಿಂದ ಭಾಗಮಂಡಲದ ವರೆಗೆ ಶುಕ್ರವಾರ ಪಾದಯಾತ್ರೆ ನಡೆಯಿತು.
ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಗಿಡನೆಟ್ಟು ಬಳಿಕ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಪರಿಸರ ಬರಹಗಾರ ನಾಗೇಶ್ಹೆಗಡೆ ಅವರ ಅಪೂರ್ವ ಪಶ್ಚಿಮಘಟ್ಟ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿತು. ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ ಪುಸ್ತಕ ಬಿಡುಗಡೆ ಮಾಡಿದರು. ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಆಶಿಸರ ಮಾತನಾಡಿ ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ ಕಳೆದ ಮೂವತ್ತು ವರ್ಷದಿಂದ ರಾಜ್ಯದಲ್ಲಿ ಆರಂಭವಾಗಿದ್ದು ಕನ್ಯಾಕುಮಾರಿಯಿಂದ ಗೋವಾವರೆಗೆ ಮೂರುದಿನ
ಪಾದಯಾತ್ರೆ ಮಾಡಿ ನೂರಾರು ಸಂಘಸಂಸ್ಥೆಗಳ ಪ್ರಮುಖರು ಹಾಗೂ ಧಾರ್ಮಿಕ ಮುಖಂಡರು ಐದು ರಾಜ್ಯಗಳಿಂದ ಭಾಗಿಯಾಗಿದ್ದು ಕರ್ನಾಟಕದಲ್ಲಿ ಅನೇಕ ಸಂಘಟನೆಗಳು ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಿದ್ದೇವೆ. ಹಲವಾರು ವಿಶೇಷ ಸಂರಕ್ಷಣೆ ಯೋಜನೆ ನಡೆದಿದೆ. ಪಶ್ಚಿಮ ಘಟ್ಟದಲ್ಲಿ ಬೇಡ್ತಿಯಿಂದ ಬರಪೊಳೆ, ತಗಡಿಯಿಂದ ಬೇಡ್ತಿವರೆಗಿನ ನದಿ ಕಣಿವೆ ಉಳಿಸುವ ಹೋರಾಟ ನಡೆಸಿದ್ದೇವೆ. ಈ ದಿನ ತಲಕಾವೇರಿ ಯಿಂದ ಭಾಗಮಂಡಲದವರೆಗೆ ಪಶ್ಚಿಮಘಟ್ಟ ಐದಾರು ಜಿಲ್ಲೆಗಳಲ್ಲಿ ಎರಡು ತಿಂಗಳು ಕ್ಯಾಂಪ್ ನಡೆಯಲಿದೆ. ಪಶ್ಚಿಮಘಟ್ಟವನ್ನು ಉಳಿಸುವಲ್ಲಿ ಸಂಘಟನೆಯನ್ನು ಬಲಯುತ ಮಾಡುವಲ್ಲಿ ಯುವಜನರನ್ನು ತೆಗೆದುಕೊಂಡು ಹಳ್ಳಿ ಜನರು ಭಾಗವಹಿಸುವಂತೆ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರುವಂತ ಜನಾಂದೋಲನದ ಸಂಕಲ್ಪ ಮಾಡಿ ಹೊರಟಿದ್ದೇವೆ ಎಂದರು. ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಮಾತನಾಡಿ ಪಶ್ಚಿಮಘಟ್ಟದ ಎಲ್ಲಾ ಪರಿಸರ ಉಳಿಸುವಂತೆ ಮಾಡಲು ಇಂದು ಐದು ರಾಜ್ಯದ ಪ್ರಮುಖರು ಮತ್ತು ಪರಿಸರ ವಾದಿಗಳು ಭಾಗಿಯಾಗಿದ್ದು ಕೊಡಗಿನಲ್ಲಿ ಕಾಡಿನ ಹಾಗೂ ನೆಲದ ಪರಿಸರ ಉಳಿಸುವ ಜನಜಾಗೃತಿ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲೂ ಕೂಡ ಜನಜಾಗೃತಿ ಮೂಡಿಸುತ್ತೇವೆ ಎಂದರು. ಜನಾಂದೋಲನದ ಪ್ರಮುಖರಾದ ವೈ.ಬಿ. ರಾಮಕೃಷ್ಣ, ಟಿ.ವಿ.ರಾಮಚಂದ್ರ, ಡಾ.ವಿಷ್ಣುಕಾಮತ್, ಡಾ.ಕೇಶವ, ಬಿ.ಎಂ.ಕುಮಾರಸ್ವಾಮಿ, ಬಿ.ಪಿ. ರಾಘವೇಂದ್ರ, ಗಜೇಂದ್ರ, ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.