ಸೋಮವಾರಪೇಟೆ,ಡಿ.15: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಬಸವೇಶ್ವರ ರಸ್ತೆಯ ಸಾಕಮ್ಮ ಬಂಗಲೆಯ ಮುಂಭಾಗದಲ್ಲಿ ಆಯೋಜಿಸ ಲಾಗಿರುವ 31ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಎಸ್.ಎ. ಮುರಳಿಧರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರಿಕೆಟ್‍ನಷ್ಟೆ ಮಾನ್ಯತೆ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೂ ಇತ್ತೀಚಿನ ದಿನಗಳಲ್ಲಿ ದೊರಕುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಪ್ರಾಚೀನ ಹಾಗೂ ಗ್ರಾಮೀಣ ಪ್ರದೇಶದ ಕ್ರೀಡೆಯಾದ ಕಬಡ್ಡಿಗೆ ಇಂದು ವಿಶ್ವದಾದ್ಯಂತ ಮಾನ್ಯತೆ ದೊರಕುತ್ತಿದೆ. ಪ್ರೊ ಕಬಡ್ಡಿ ಆರಂಭವಾದ ನಂತರ ದೇಶಾದ್ಯಂತ ಕೋಟ್ಯಂತರ ಕ್ರೀಡಾಪ್ರೇಮಿಗಳು ವೀಕ್ಷಣೆ ಮಾಡಿದರ ಫಲಶ್ರುತಿಯಾಗಿ ಕಬಡ್ಡಿ ಪಟುಗಳಿಗೆ ಉತ್ತಮ ಸಂಭಾವನೆ ಹಾಗೂ ಉದ್ಯೋಗ ದೊರಕುತ್ತಿದೆ ಎಂದರು.
ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಕೆ.ಎ.ಆದಂ ಮಾತನಾಡಿ, ದೇಶದ ಪ್ರಧಾನಿಯಾಗಿ ಉಕ್ಕಿನ ಮಹಿಳೆಯೆಂದೇ ಹೆಸರು ಮಾಡಿದ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕಳೆದ 31ವರ್ಷಗಳಿಂದ ನಿರಂತರವಾಗಿ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿ ರುವದು ಶ್ಲಾಘನೀಯ. ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯತೆ ಇದೆ ಎಂದು ಹೇಳಿದರು.
ಪ.ಪಂ. ಮಾಜಿ ಅಧ್ಯಕ್ಷೆ ನಳಿನಿ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮೀನಾಕುಮಾರಿ, ಬಿ.ಜಿ.ಇಂದ್ರೇಶ್, ಶೀಲಾ ಡಿಸೋಜಾ, ಆಟೋಚಾಲಕರ ಸಂಘದ ಮಾಜಿ ಕಾರ್ಯದರ್ಶಿ ಹಸನಬ್ಬ, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್, ಕಬಡ್ಡಿ ತೀರ್ಪುಗಾರರಾದ ಇಸಾಕ್ ಮತ್ತಿತರರು ಇದ್ದರು.