ಮಡಿಕೇರಿ ಡಿ.15: ಎಲ್ಲಾ ಬಡಜನರ ಅನುಕೂಲಕ್ಕಾಗಿ ಜಾರಿಗೊಳಿಸಲಾಗಿರುವ ಕಂದಾಯ ಕಾನೂನು 94-ಎ, 94-ಬಿ, 94-ಸಿ ಮತ್ತು 94ಸಿಸಿ ರಡಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಕಂದಾಯ ಸಚಿವÀ ಕಾಗೋಡು ತಿಮ್ಮಪ್ಪ ಅವರು ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವವರು, ಭೂಮಿ ಉಳುಮೆ ಮಾಡುವವರು ಸಕ್ರಮಗೊಳಿಸುವ ನಿಟ್ಟಿನಲ್ಲಿ 94-ಎ, 94-ಬಿ, 94-ಸಿ ಮತ್ತು 94ಸಿಸಿಯನ್ನು ಸರ್ಕಾರ ಜಾರಿಗೊಳಿಸಿದ್ದು, ಅದನ್ನು ಸರ್ಕಾರದ ನಿರ್ದೇಶನದಂತೆ ನಿಯಮಾನುಸಾರ ಬಡಜನರಿಗೆ ಒಳಿತು ಮಾಡಬೇಕು. ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 94ಎ ನಡಿ 4,700 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಮಡಿಕೇರಿ ತಾಲ್ಲೂಕಿನಲ್ಲಿ 180, ವಿರಾಜಪೇಟೆ ತಾಲೂಕು 1612, ಸೋಮವಾರಪೇಟೆ ತಾಲೂಕಿನಲ್ಲಿ 3 ಸಾವಿರ ಅರ್ಜಿಗಳು ಬಾಕಿ ಇವೆ. ಇವುಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಕಂದಾಯ ಸಚಿವರು ಸೂಚನೆ ನೀಡಿದರು.

ಇಬ್ಬರು ಸದಸ್ಯರು ಬಂದರೂ ಸಹ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಪ್ರತೀ ವಾರ ಸಭೆ ನಡೆಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು. 94ಬಿ ನಡಿ ಸೋಮವಾರಪೇಟೆ ತಾಲೂಕು ಒಂದರಲ್ಲಿ 4 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಆದಷ್ಟು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅವರು ನಿರ್ದೇಶನ ನೀಡಿದರು.

94ಸಿ ರಡಿ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಹೊಸದಾಗಿ ಅರ್ಜಿ ಸಲ್ಲಿಸಲು ಫೆಬ್ರವರಿ 2 ರವರೆಗೆ ಕಾಲಾವಕಾಶವಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ಪಿಡಿಓಗಳ ಜೊತೆ ಕಾರ್ಯಾಗಾರ ಏರ್ಪಡಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸುವ ಸಂದರ್ಭದಲ್ಲಿ ಬರೀ ಐದು ಕಡತಗಳನ್ನು ಮಾತ್ರ ತರುತ್ತಾರೆ. ಈ ರೀತಿ ಆದರೆ ಶೀಘ್ರ ವಿಲೇವಾರಿ ಮಾಡುವದಾದರೂ ಹೇಗೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ತಿರಸ್ಕøತಗೊಂಡ ಅರ್ಜಿಗಳೇ ಹೆಚ್ಚು ಇವೆ. 1531 ಅರ್ಜಿಗಳು ತಿರಸ್ಕøತಗೊಂಡಿದ್ದು, ಈ ಅರ್ಜಿಗಳನ್ನು ಮರು ಪರಿಶೀಲನೆ ಮಾಡಬೇಕಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು 909 ಅರ್ಜಿಗಳು ತಿರಸ್ಕøತಗೊಂಡಿದ್ದು, ಬಡ ಜನರು ಎಲ್ಲಿಗೆ ಹೋಗಬೇಕು ಎಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು.

94ಸಿಸಿ ರಡಿ ಮಡಿಕೇರಿ ತಾಲೂಕಿನಲ್ಲಿ 172 ಅರ್ಜಿಗಳು ತಿರಸ್ಕøತಗೊಂಡಿದೆ. ಈ ರೀತಿ ಆದರೆ ಹೇಗೆ ಎಂದು ಪ್ರಶ್ನಿಸಿದರು.

ಅರಣ್ಯ ಹಕ್ಕು ಸಮಿತಿ ಸಭೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೋಗುವದಿಲ್ಲ. ಬಹಳಷ್ಟು ಅರ್ಜಿಗಳು ತಿರಸ್ಕøತವಾಗಲು ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಕೆ.ಜಿ.ಬೋಪಯ್ಯ ಅಸಮಾದಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು ಪೋಡಿ ಪ್ರಕರಣಗಳು ಎಷ್ಟು ವಿಲೇವಾರಿಯಾಗಿವೆ. ಕಾಲ ಕಾಲಕ್ಕೆ ಅದಾಲತ್ ನಡೆಸಲಾಗುತ್ತದೆಯೇ ಎಂದು ಮಾಹಿತಿ ಪಡೆದರು.

ಪೋಡಿ ಮುಕ್ತ ಗ್ರಾಮ ಸಂಬಂಧಿಸಿದಂತೆ 512 ಕ್ಕೆ 459 ಪೂರ್ಣಗೊಳಿಸಲಾಗಿದೆ. ಇನ್ನಷ್ಟು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು. ಸರ್ವೇಯರುಗಳ ನೇಮಕ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕೆ.ಜಿ. ಬೋಪಯ್ಯ ಅವರು ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಕಡತಗಳನ್ನು ಪಿಡಿಓಗಳು ತೆಗೆದುಕೊಂಡು ಹೋಗಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಐಕೊಳ-ಮೂರ್ನಾಡು, ಬಿರುನಾಣಿ-ತೆರಾಲು ಕಡೆಗಳಲ್ಲಿ ರಸ್ತೆ ನಿರ್ಮಿಸಲು ಬಿಡುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಸಚಿವರ ಗಮನಕ್ಕೆ ತಂದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಸೋಮವಾರಪೇಟೆ ತಾಲೂಕಿನಲ್ಲಿ 94ಸಿ ನಡಿ 12,300 ಅರ್ಜಿಗಳು ಬಾಕಿ ಇದ್ದು, 590 ಹಕ್ಕು ಪತ್ರಗಳನ್ನು ಮಾತ್ರ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಕೊಡುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ವಿದ್ಯುತ್, ರಸ್ತೆ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಶ್ರೀವಿದ್ಯಾ 94-ಎ, 94-ಬಿ, 94-ಸಿ ಮತ್ತು 94ಸಿಸಿ ಸಂಬಂಧಿಸಿದಂತೆ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ಹೇಳಿದರು.