ಮಡಿಕೇರಿ, ಡಿ. 15: ಆರಂಭಗೊಂಡು ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಮತ್ತೆ ಪುನರಾರಂಭಿಸುವಂತೆ ಆಗ್ರಹಿಸಿ ಚೆಂಬು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಕಾಂತುಬೈಲು ದಬ್ಬಡ್ಕ ಶ್ರೀರಾಮ ಯುವಕ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಚೆಂಬು ಗ್ರಾಮದ ದಬ್ಬಡ್ಕ ಮೂಲಕ ಚೆಟ್ಟಿಮಾನಿ- ಭಾಗಮಂಡಲ ಸಂಪರ್ಕ ಕಲ್ಪಿಸುವ ರಸ್ತೆ ಹಲವು ಗ್ರಾಮಸ್ಥರಿಗೆ ಪ್ರಯೋಜನಕಾರಿಯಾಗಿದೆ. ದಬ್ಬಡ್ಕ ಗ್ರಾಮದಲ್ಲಿ 182 ಮನೆಗಳಿದ್ದು, 700 ಜನ ವಾಸವಿರುತ್ತಾರೆ. ಇವರೆಲ್ಲರಿಗೂ ಈ ರಸ್ತೆಯೇ ಸಂಪರ್ಕ ರಸ್ತೆಯಾಗಿದೆ. ಆರಂಭದಿಂದ 5 ಕಿ.ಮೀ. ಮತ್ತು ಮಧ್ಯದಲ್ಲಿ 1 ಕಿ.ಮೀ. ರಸ್ತೆಯು ಡಾಮರೀಕರಣಗೊಂಡಿದೆ. ಆದರೆ 2009ರಲ್ಲಿ ಕ್ಷೇತ್ರದ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಅವರ ಅವಧಿಯಲ್ಲಿ ಇನ್ನುಳಿದ 4 ಕಿ.ಮೀ. ವ್ಯಾಪ್ತಿಗೆ ಡಾಮರೀಕರಣಕ್ಕೆ ಅನುದಾನ ಬಂದು ಕೆಲಸ ಆರಂಭಗೊಂಡರೂ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದೆ.

ಕಳೆದ ಹಲವಾರು ವರ್ಷಗಳಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದು, ಯಾವದೇ ಪ್ರಯೋಜನವಾಗಿಲ್ಲ. ಅಲ್ಲದೆ 2017-18ನೇ ಸಾಲಿನಲ್ಲಿ ಈ ರಸ್ತೆಗೆ 1 ಕೋಟಿ 45 ಲಕ್ಷ ರೂಪಾಯಿಗಳ ಪ್ರಸ್ತಾವನೆಯನ್ನು ಶಾಸಕರ ಮೂಲಕ ನಬಾರ್ಡ್‍ಗೆ ಕಳುಹಿಸಿದ್ದು, ಯಾವದೇ ಪ್ರತಿಕ್ರಿಯೆ ಬಂದಿಲ್ಲ. ಹಾಗೂ ಚೇರಂಬಾಣೆಯಿಂದ 28 ಕಿ.ಮೀ.ನಲ್ಲಿ ಬರುವ ದಿ. ಅರಂಬೂರು ರಾಘವ ಅವರ ಕೃಷಿಭೂಮಿಯ ಪಕ್ಕದ ಹೊಳೆಗೆ ಸೇತುವೆ ನಿರ್ಮಾಣಕ್ಕೂ ರೂ. 1 ಕೋಟಿಯ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೂ ಯಾವದೇ ಪ್ರತಿಕ್ರಿಯೆ ಬಂದಿಲ್ಲ.

ರಸ್ತೆ ಅಭಿವೃದ್ಧಿಯಾಗದಿದ್ದಲ್ಲಿ ಮುಂದೆ ಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ಆದಷ್ಟು ಶೀಘ್ರ ರಸ್ತೆಯನ್ನು ಅಭಿವೃದ್ಧಿಪಡಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.