ಮಡಿಕೇರಿ, ಡಿ.15 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಆಶ್ರಯದಲ್ಲಿ ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ಡಿ.18 ರಂದು ನಾಪೋಕ್ಲುವಿನ ಕೊಳಕೇರಿಯಲ್ಲಿರುವ ಕಾವೇರಿ ಎಸ್ಟೇಟ್ ಮೈದಾನದಲ್ಲಿ ವಾರ್ಷಿಕ ‘ತೋಕ್ ನಮ್ಮೆ’ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿದೆ. ಇದರ ಹಕ್ಕು ಮತ್ತು ರಕ್ಷಣೆ ಅಭಾದಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಗಾಗಿ ಕಾರ್ಯಕ್ರಮದಲ್ಲಿ ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗುವದು ಎಂದು ಹೇಳಿದರು.

ಬಿಲ್ಲು-ಬಾಣ, ಈಟಿ-ಭರ್ಜಿ, ಇಂದು ತೋಕ್(ಬಂದೂಕ)-ಒಡಿಕತ್ತಿಯನ್ನು ಪೂಜಿಸುವ ಪದ್ಧತಿಯನ್ನು ಕೊಡವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮುಂದಿನ ಪೀಳಿಗೆಗೆ ಈ ಸಂಸ್ಕøತಿಯನ್ನು ಪರಿಚಯಿಸುವ ಮತ್ತು ಸಾಂಪ್ರದಾಯಿಕ ಕೋವಿ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಿಎನ್‍ಸಿ ಮಾಡುತ್ತಿದ್ದು, ಏಳನೇ ವರ್ಷದ ತೋಕ್ ನಮ್ಮೆ ಉತ್ಸವ ಪೂರ್ವಾಹ್ನ 10.30 ಗಂಟೆಗೆ ಕೊಳಕೇರಿಯ ಅಪ್ಪಚ್ಚಿರ ರಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್ ಮೈದಾನದಲ್ಲಿ ನಡೆಯಲಿದೆ ಎಂದರು.

ಕೊಡವ ಬುಡಕಟ್ಟು ಕುಲದ ಗರ್ಭಗುಡಿಯಾದ “ನೆಲ್ಲಕ್ಕಿ”ಯಡಿಯಲ್ಲಿ ಪ್ರಧಾನ ಸ್ಥಾನ ಪಡೆದಿರುವ ಆಯುಧ ಕೋವಿಯಾಗಿದ್ದು, ಕೊಡವರ ಧಾರ್ಮಿಕ ಮತ್ತು ಸಾಂಸ್ಕøತಿಕ ಲಾಂಛನವೂ ಆಗಿದೆ. ಇದನ್ನು ಸರಕಾರ ಮಾನ್ಯ ಮಾಡಿ ಗೌರವಿಸುವ ಕಾರ್ಯವಾಗಬೇಕಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸರಕಾರದ ಹಾದಿ ತಪ್ಪಿಸಿ ಕೊಡವರ ಕೋವಿ ಹಕ್ಕಿಗೆ ಅಡ್ಡಿ ಆತಂಕಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ನಾಚಪ್ಪ ಆರೋಪಿಸಿದರು. ಕೋವಿ ಹಕ್ಕಿನ ಬಗ್ಗೆ ಕೊಡವರಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ಸಿಎನ್‍ಸಿ ಸಂಘಟನೆ ಪ್ರತಿವರ್ಷ ತೋಕ್ ನಮ್ಮೆಯನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.

ತಾ.18 ರಂದು ‘ತೋಕ್ ಪಾಟ್’ (ಹಾಡು) ನೊಂದಿಗೆ ಬಂದೂಕಿಗೆ ಸಾಮೂಹಿಕ ಪೂಜೆ ನೆರವೇರಿಸಲಾಗುವದು. ನಂತರ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಪ್ರತ್ಯೇಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೋವಿ ಹಕ್ಕಿನ ಪರವಾದ ನಿರ್ಣಯಗಳನ್ನು ಕೈಗೊಳ್ಳಲಾಗುವದು ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವದು. ಇದರೊಂದಿಗೆ ಕೊಡವ ಸಾಂಪ್ರದಾಯಿಕ ಭೋಜನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ನಾಚಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪುಲ್ಲೇರ ಕಾಳಪ್ಪ ಹಾಗೂ ಮನೋಜ್ ಮಂದಣ್ಣ ಉಪಸ್ಥಿತರಿದ್ದರು.