ಮೂರ್ನಾಡು, ಡಿ. 15: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ವೆಂಕಟೇಶ್ವರ ಕಾಲೋನಿ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿ ಉದ್ಘಾಟಿಸಲಾಯಿತು. 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಪೈಪ್ಲೈನ್, ಮೋಟಾರ್ ಅಳವಡಿಸಿ ಕಲ್ಪಿಸಲಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಾಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಉದ್ಘಾಟಿಸಿದರು.
ಹಲವು ವರ್ಷಗಳಿಂದ ನಿವಾಸಿಗಳು ರಸ್ತೆ ಬದಿಯ ಟ್ಯಾಂಕ್ನಿಂದ ಕುಡಿಯುವ ನೀರು ತಂದು ಪೂರೈಸುತ್ತಿದ್ದರು. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಪಂಚಾಯಿತಿ ನಿಧಿಯ ಅನುದಾನದಲ್ಲಿ ಈ ಹಿಂದೆ ತಾತ್ಕಾಲಿಕವಾಗಿನಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿತು. ಈಗ ಬೋರ್ವೆಲ್ ಮೂಲಕ ಮೋಟಾರ್ ಅಳವಡಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿದೆ.
ಈ ಸಂದರ್ಭ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ, ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ನೀರು ಸಮಿತಿ ಅಧ್ಯಕ್ಷ ರವಿ, ಸದಸ್ಯರಾದ ಮೀನಾಕ್ಷಿ ಕೇಶವ, ರಾಧ, ಈರ ಸುಬ್ಬಯ್ಯ, ಸುಜಾತ, ಸಾಧಿಕ್, ಗುತ್ತಿಗೆದಾರ ಕುಶಾಲಪ್ಪ, ನಿವಾಸಿಗಳು, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.