ಮಡಿಕೇರಿ, ಡಿ. 15: ಕೊಡಗು ಜಿಲ್ಲೆಯಲ್ಲಿ ಮತ್ತೆರಡು ಹೊಸ ತಾಲೂಕು ರಚನೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅಸ್ಪಷ್ಟ ನಿಲುವು ಕಂಡುಬಂದಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯ ಬಳಿಕ ತಾಲೂಕು ಹೋರಾಟಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವಿನ ಬಗ್ಗೆ ಸುದ್ದಿಗಾರರು ಪ್ರಶ್ನಿಸಲಾಯಿತು. ರಾಜ್ಯದಲ್ಲಿ ಈಗಾಗಲೇ 50 ಹೊಸ ತಾಲೂಕು ಘೋಷಣೆ ಮಾಡಲಾಗಿದೆ. ಘೋಷಣೆ ಮಾಡಿದ ತಾಲೂಕುಗಳು ಅಸ್ತಿತ್ವ ಕಂಡುಕೊಂಡು ಕಾರ್ಯರೂಪಕ್ಕೆ ಬರುವವರೆಗೆ ಹೊಸ ತಾಲೂಕು ಘೋಷಣೆ ಇಲ್ಲ. ಹೋರಾಟಗಾರರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವಂತೆ ಸಲ್ಲಿಸಲಿ. ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳುತ್ತಾರೆ ಎಂದುತ್ತರಿಸಿದರು.

ಇದೇ ಸಂದರ್ಭ ಪೊನ್ನಂಪೇಟೆ ತಾಲೂಕು ರಚನೆ ಹೋರಾಟ ಸಮಿತಿಯ ಪ್ರಮುಖರು, ಸಮಿತಿಯ ಸಂಚಾಲಕ ಎಂ.ಎಂ. ರವೀಂದ್ರ ನೇತೃತ್ವದಲ್ಲಿ ಸಚಿವರಲ್ಲಿ ತಾಲೂಕು ರಚನೆಯ ಬೇಡಿಕೆ ಮುಂದಿಟ್ಟಾಗ ಪರಿಶೀಲಿಸುವ ಭರವಸೆ ನೀಡಿದರು.ಅರಣ್ಯಾಧಿಕಾರಿಗಳ ವಿರುದ್ಧ ಬೋಪಯ್ಯ ಆಕ್ರೋಶ

ನಮ್ಮ ಗ್ರಾಮ- ನಮ್ಮ ರಸ್ತೆ ಹಾಗೂ ಪಿಎಂಜಿಎಸ್‍ವೈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಅರಣ್ಯ ಹಕ್ಕು ಸಮಿತಿಗಳ ಸಭೆಗಳಿಗೆ ಅರಣ್ಯಾಧಿಕಾರಿಗಳು ಹಾಜರಾಗುತ್ತಿಲ್ಲ. ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓಗಳು ಅರಣ್ಯಾಧಿಕಾರಿಗಳ ಬಳಿ ಕಡತ ತೆಗೆದುಕೊಂಡು ತೆರಳಬೇಕಾಗಿದೆ. ಇಲ್ಲದಿದ್ದಲ್ಲಿ ಮೊಕದ್ದಮೆ ದಾಖಲಿಸುವದಾಗಿ ಅರಣ್ಯಾಧಿಕಾರಿಗಳು ಹೆದರಿಸುತ್ತಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಸಚಿವರ ಬಳಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಅರಣ್ಯಾಧಿಕಾರಿಗಳ ಬಳಿ ಸಚಿವರು ಮಾಹಿತಿ ಬಯಸಿದಾಗ ಅರಣ್ಯ ಸಂರಕ್ಷಣಾಧಿಕಾರಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೊರ ಜಿಲ್ಲೆಗೆ ತೆರಳಿದ್ದಾರೆ ಎಂದು ಸಮಜಾಯಿಷಿಕೆ ನೀಡಲು ಮುಂದಾದ ಉಪ ಅರಣ್ಯಾಧಿಕಾರಿಗಳ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಹಿರಿಯ ಸಚಿವರು ಜಿಲ್ಲೆಗೆ ಆಗಮಿಸಿದ ಸಂದರ್ಭ ಜನರ ಸಮಸ್ಯೆಗಳಿಗಿಂತ ಕ್ರೀಡೆ ಮುಖ್ಯಾನಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೇಮಾಡು ಗ್ರಾಮದಲ್ಲಿ 2009ರಲ್ಲಿ ಎರಡು ಎಕರೆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಿದ್ದು, ಅಲ್ಲಿ ಶವ ಸಂಸ್ಕಾರ ಮಾಡಲಾಗಿದೆ. ಇದೀಗ ಜಿಲ್ಲಾಡಳಿತ ಆ ಜಾಗವನ್ನು ಕ್ರಿಕೆಟ್ ಸಂಸ್ಥೆಗೆ ನೀಡಿರುವದರಿಂದ ಮರಳಿ ಸ್ಮಶಾನ ಜಾಗವನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ ನಡೆಸಿ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸಚಿವರು ಪರಿಶೀಲಿಸುವದಾಗಿ ಭರವಸೆ ನೀಡಿದರು. ಅಲ್ಲದೆ ಚೆರಿಯಪರಂಬು, ಆರ್ಜಿ ಗ್ರಾಮದ ತರ್ಮೆಕಾಡು ಪೈಸಾರಿ ಹಾಗೂ ಇತರೆಡೆ ಸರ್ಕಾರಿ ಭೂಮಿಯಲ್ಲಿ ನೆಲೆಸಿರುವವರಿಗೆ ಹಕ್ಕುಪತ್ರ ವಿತರಿಸುವಂತೆ ಬೇಡಿಕೆ ಮುಂದಿಟ್ಟರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ವಿತರಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಪದಾಧಿಕಾರಿಗಳಾದ ಡಿ.ಸಿ. ನಿರ್ವಾಣಪ್ಪ, ಅಮೀನ್ ಮೊಹಿಸಿನ್, ಮೊಣ್ಣಪ್ಪ ಹಾಗೂ ಇತರರು ಇದ್ದರು.

ತನ್ನ ವಿರುದ್ಧ ಸ್ಪರ್ಧಿಸಿದರೆ ಪ್ರಭಾಕರ್ ಭಟ್‍ಗೆ ಠೇವಣಿ ನಷ್ಟ : ರಮಾನಾಥ್ ರೈ ವ್ಯಂಗ್ಯ

ಸಿದ್ದಾಪುರ: ತನ್ನ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರಿಗೆ ಠೇವಣಿ ಸಿಗುವದಿಲ್ಲವೆಂದು ರಾಜ್ಯ ಅರಣ್ಯ ಸಚಿವ ರಮಾನಾಥ ರೈ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ವೀರಾಜಪೇಟೆಯ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಈವರೆಗೂ ಯಾವದೇ ಗ್ರಾ.ಪಂ. ಚುನಾವಣೆಯಲ್ಲಿಯೂ ಸ್ಪರ್ಧಿಸಿಲ್ಲ. ತನ್ನ ವಿರುದ್ಧ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ, ಕ್ಷೇತ್ರದ ಮತದಾರರಿಗೆÀ ತಾನು ಹೇಗೆ ಎಂಬುದು ಗೊತ್ತಿದೆ. ಹಾಗಾಗಿ ಪ್ರಭಾಕರ ಭಟ್ ಸ್ಪರ್ಧಿಸಿದರೆ ಅವರಿಗೆ ಠೇವಣಿ ಕೂಡ ಸಿಗುವದಿಲ್ಲ ಎಂದು ವ್ಯಂಗ್ಯವಾಡಿದರು. ಸರಕಾರದ ನಿಯಮದಂತೆ ಅವರ ಶಾಲೆಗೆ ಅನುದಾನವನ್ನು ನಿಲ್ಲಿಸಲಾಗಿದೆ ಎಂದು ಸಮರ್ಥಿಸಿಕೊಂಡರು.