ಗೋಣಿಕೊಪ್ಪ ವರದಿ, ಡಿ.15 : ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಬೋನ್ನಿಂದ ತಪ್ಪಿಸಿಕೊಳ್ಳುವ ಮೂಲಕ ಚಿರತೆಯೊಂದು ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಚಿಕ್ಕಮುಂಡೂರು ಗ್ರಾಮದಲ್ಲಿ ನಡೆದಿದೆ. ನಂತರ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಮತ್ತೊಂದು ಬೋನ್ ಇಟ್ಟು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಭಯದಿಂದ ಸಾಕುಪ್ರಾಣಿಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಚಿರತೆ ಜೀವಭಯದಿಂದ ಗ್ರಾಮದಿಂದ ಕಾಲ್ಕಿತ್ತು ಪಕ್ಕದ ಗ್ರಾಮದಲ್ಲಿ ತನ್ನ ಬೇಟೆ ಮುಂದುವರಿಸಿದೆ. ಚಿಕ್ಕಮುಂಡೂರು ಮತ್ತು ನಡಿಕೇರಿ ಗ್ರಾಮಗಳಲ್ಲಿ ಈ ಘಟನೆ ನಡೆಯುತ್ತಿದೆ.
ಕಳೆದ ಹಲವು ತಿಂಗಳುಗಳಿಂದ ಚಿಕ್ಕಮುಂಡೂರು ಗ್ರಾಮದಲ್ಲಿ ಸೇರಿಕೊಂಡಿರುವ ಚಿರತೆಯೊಂದು ಗ್ರಾಮಸ್ಥರ ಸಾಕುಪ್ರಾಣಿಗಳನ್ನು ತಿಂದು ಆತಂಕ ಸೃಷ್ಟಿಸಿತ್ತು. ಇದರಿಂದ ಗ್ರಾಮಸ್ಥರ ಒತ್ತಾಯದಂತೆ ಪೊನ್ನಂಪೇಟೆ ಅರಣ್ಯ ಇಲಾಖೆ ಗ್ರಾಮದ ದೇವರಕಾಡು ಸಮೀಪ ಬೋನ್ ಇಟ್ಟು ಸೆರೆಗೆ ಮುಂದಾಗಿದ್ದರು. ಬೋನ್ನಲ್ಲಿ ಮಾಂಸವಿಟ್ಟು ಕಾಯುತ್ತಿದ್ದರು. ರಾತ್ರಿ ಬೋನ್ಗೆ ಬಂದ ಚಿರತೆ ಮಾಂಸವನ್ನು ಸಂಪೂರ್ಣ ತಿಂದು ಪರಾರಿಯಾಗಲು ಯತ್ನಿಸಿದೆ. ಈ ಸಂದರ್ಭ ಬೋನ್ ಕೆಳಗಿನ ಹಲಗೆ ಕಿತ್ತು ಬಂದಿದೆ. ನೆಲಕ್ಕೆ ತಾಗುವಂತೆ ಬೋನ್ ಇಟ್ಟಿದ್ದರಿಂದ ಚಿರತೆಯು ನೆಲವನ್ನು ಕೆರೆದು ಗುಂಡಿ ಮಾಡಿ ತಪ್ಪಿಸಿಕೊಂಡಿದೆ. ಅರಣ್ಯ ಇಲಾಖೆ ಬೋನ್ ನೋಡುವಾಗ ವಿಷಯ ತಿಳಿದಿದೆ. ಬೇರೆ ಬೋನ್ ಇಟ್ಟು ಮತ್ತೆ ಚಿರತೆಗಾಗಿ ಕಾಯುತ್ತಿದ್ದಾರೆ.
ಬೋನ್ನಲ್ಲಿ ಸೆರೆಯಾಗಿ ಜೀವಭಯದಲ್ಲಿದ್ದ ಚಿರತೆಗೆ ಬೋನ್ನಿಂದ ಹೊರ ಬಂದು ಗ್ರಾಮದಿಂದ ಕಾಲ್ಕಿತ್ತಿದೆ. ನಡಿಕೇರಿ ಗ್ರಾಮದಲ್ಲಿ ಈಗಾಗಲೇ 4 ಸಾಕುನಾಯಿಗಳನ್ನು ತಿಂದುಹಾಕಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.