ಮಡಿಕೇರಿ, ಡಿ. 15: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ರ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಇತ್ತೀಚೆಗೆ ಸಭೆ ನಡೆಯಿತು.

2018 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮತದಾರರ ಪಟ್ಟಿ ತಯಾರಿಸುವದು, ಬೂತ್ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸುವದು, ಅರ್ಹ ಮತದಾರರ ನೋಂದಣಿ ಬಗ್ಗೆ ಕ್ರಮ ವಹಿಸುವದು, ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ತಮಗೆ ವಹಿಸಿದ ಮತಗಟ್ಟೆಗಳ ಮತದಾರರ ಪಟ್ಟಿಯ ಒಟ್ಟು ಮನೆಗಳ ಶೇ. 25 ರಷ್ಟು ಮತದಾರರ ಮನೆಗಳಿಗೆ ಖುದ್ದು ಭೇಟಿ ನೀಡಿ ಮನೆಯ ಎಲ್ಲಾ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯಾಗಿರುವ ಬಗ್ಗೆ ಪರಿಶೀಲಿಸುವದು ಮತ್ತಿತರ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಮೃತ, ಸ್ಥಳಾಂತರ ಮತ್ತು ಪುನರಾವರ್ತನೆ ಯಾಗಿರುವ ಮತದಾರರನ್ನು ಕೈಬಿಡಲು ಕ್ರಮವಹಿಸುವದು. ಮತದಾರರಿಗೆ ಶೇ. 100 ರಷ್ಟು ಮತದಾರರ ಗುರುತು ಚೀಟಿ ವಿತರಣೆ ಮಾಡಿರುವ ಬಗ್ಗೆ ಪರಿಶೀಲಿಸುವದು. ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಮತದಾರರ ಪಟ್ಟಿಯ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳಿಂದ ವರದಿಯನ್ನು ಪಡೆಯುವ ಕಾರ್ಯ ಆಗಬೇಕು ಎಂದರು.

ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಅವರ ವ್ಯಾಪ್ತಿಗೆ ಒಳಪಡುವ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ಒಟ್ಟು ಮನೆಗಳ ಶೇ. 10 ರಷ್ಟು ಮತದಾರರ ಮನೆಗಳಿಗೆ ಭೇಟಿ ನೀಡಿ ಬೂತ್ ಲೆವಲ್ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿ ಪರಿಶೀಲನೆ ಮಾಡಿರುತ್ತಾರೆಯೇ ಎಂದು ಪರಿಶೀಲಿಸುವದು. ಮನೆಯ ಎಲ್ಲಾ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಮತಗಟ್ಟೆಗಳಿಗೆ ಖುದ್ದು ತೆರಳಿ ಮತಗಟ್ಟೆಯ ಬಗ್ಗೆ ನೀಡಲಾಗುವ ಅನುಬಂಧ-2ರ ಚೆಕ್‍ಲಿಸ್ಟ್‍ನಲ್ಲಿ ಮಾಹಿತಿಯನ್ನು ತಯಾರಿಸಿ ತಾಲ್ಲೂಕು ಕಚೇರಿಗೆ ಸಲ್ಲಿಸುವದು. ವಿದ್ಯುಚ್ಛಕ್ತಿ ಸೌಲಭ್ಯ, ಕುಡಿಯುವ ನೀರು, ರ್ಯಾಂಪ್ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಅಥವಾ ಮಳೆ ಬಂದಲ್ಲಿ ಮೇಲು ಛಾವಣಿಯಿಂದ ಮಳೆ ನೀರು ಒಳನುಗ್ಗುವ ಬಗ್ಗೆ ಪರಿಶೀಲಿಸಿ ವರದಿ ನೀಡುವದು, ಹಿಂದಿನ ಚುನಾವಣೆಗಳಲ್ಲಿ ಶಾಂತಿಯುತ ಮತದಾನಕ್ಕೆ ಭಂಗ ತರುವಂತಹ ಘಟನೆಗಳು ಮತಗಟ್ಟೆಯಲ್ಲಿ ಸಂಭವಿಸಿದರೆ ಮಾಹಿತಿ ಸಂಗ್ರಹಿಸಿ ವರದಿ ನೀಡುವದು.

ಪ್ರತಿದಿನ ಸ್ವೀಕರಿಸಿದ ನಮೂನೆ-6, 7, 8, 8ಎ ವಿವರವನ್ನು ಇ.ಆರ್.ಎಂ.ಎಸ್.ನಲ್ಲಿ ದಾಖಲಿಸು ವದು ಹಾಗೂ 1300 ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳಲ್ಲಿ ವಿಶೇಷ ಗಮನಹರಿಸಿ ಮೃತ, ಸ್ಥಳಾಂತರ ಮತ್ತು ಪುನರವರ್ತನೆಯಾಗಿರುವ ಮತದಾರರನ್ನು ಕೈ ಬಿಡಲು ಕ್ರಮವಹಿಸಬೇಕಿದೆ ಎಂದರು. ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ, ತಹಶೀಲ್ದಾರ್ ಕುಸುಮ, ಮಹೇಶ್, ಗೋವಿಂದರಾಜು ಇತರರು ಇದ್ದರು.