ಸೋಮವಾರಪೇಟೆ, ಡಿ. 15: ದ್ವೇಷ, ಅಸೂಯೆಗಳಿಂದಾಗಿ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ ಎಂದು ಇಲ್ಲಿನ ಜೆಎಂಎಫ್‍ಸಿ ಕಿರಿಯ ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ಆಶ್ರಯದಲ್ಲಿ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇಂದು ವ್ಯಕ್ತಿವ್ಯಕ್ತಿಗಳ ನಡುವೆ ದ್ವೇಷ, ಅಸೂಯೆಗಳಿಂದಾಗಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದೆ, ಅಪರಾಧಗಳು ಹೆಚ್ಚುತ್ತಿವೆ. ಜಾತೀಯತೆಯೊಂದಿಗೆ ವರ್ಗ, ವರ್ಗಗಳ ನಡುವೆ ತಾರತಮ್ಯ ಮುಂತಾದ ವಿಚಾರಗಳೂ ಸಹ ಅಪರಾಧಗಳಿಗೆ ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಿದರು. ಅಪರಾಧ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಹೇಳಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಭಾರತ ದೇಶ ಬಲಿಷ್ಠ ಹಾಗೂ ಸದೃಢ ಕಾನೂನನ್ನು ಅಳವಡಿಸಿಕೊಂಡಿದೆ. ಆದರೆ ಅನಕ್ಷರತೆ ಮತ್ತು ಕಾನೂನಿನ ಅರಿವಿನ ಕೊರತೆಯಿಂದಾಗಿ ಇಂದು ದೇಶಾದ್ಯಂತ ಅಪರಾಧಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ ಎಂದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಆರಕ್ಷಕ ಉಪನಿರೀಕ್ಷಕ ಶಿವಣ್ಣ, ಅಪರಾಧ ವಿಭಾಗದ ಉಪನಿರೀಕ್ಷಕ ಮಂಚಯ್ಯ ಉಪಸ್ಥಿತರಿದ್ದರು. ಪೊಲೀಸ್ ಪೇದೆಗಳಾದ ಶಿವಕುಮಾರ್ ಸ್ವಾಗತಿಸಿ, ವಸಂತ್ ವಂದಿಸಿದರು.