ಸೋಮವಾರಪೇಟೆ, ಡಿ. 15: ಪರಿಸರವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಮ್ಮ ದಿನನಿತ್ಯದ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾವು ಕಾಪಾಡಿ ಸಂರಕ್ಷಿಸಬೇಕು. ನಾಳಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಕರು ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಹೆಚ್.ಜಿ. ಭಾಗ್ಯ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 2016-17 ನೇ ಸಾಲಿನ ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆÉ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಪರಿಸರ ಮಿತ್ರ’ ಶಾಲಾ ಯೋಜನೆಯ ರೂಪುರೇಷೆಗಳ ಕುರಿತು ಮಾಹಿತಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಈ ಯೋಜನೆಯು ಮಕ್ಕಳು ಪ್ರಾಯೋಗಿಕ ವಾಗಿ ಪರಿಸರದ ಪ್ರೀತಿಯನ್ನು ಬೆಳೆಸಲೆಂದು ರೂಪಿಸಿರುವ ಅತ್ಯಂತ ವಾಸ್ತವಿಕ ಕಾರ್ಯಕ್ರಮವಾಗಿದೆ ಎಂದರು.

‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಶಾಲೆಯಲ್ಲಿ ಇಕೋ ಕ್ಲಬ್ ಮೂಲಕ ಕೈಗೊಳ್ಳುವ ಪರಿಸರ ಸ್ನೇಹಿ ಚಟುವಟಿಕೆಗಳು ಹಾಗೂ ಪರಿಸರ ವ್ಯವಸ್ಥೆಗಳ ಕುರಿತು ಸ್ಲೈಡ್ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾ ಧಿಕಾರಿ ಸಿ.ಆರ್. ನಾಗ ರಾಜಯ್ಯ ಮಾತನಾಡಿ, ಪರಿಸರ ಮಿತ್ರ ಯೋಜನೆಯನ್ನು ಸಕಾರಗೊಳಿಸಲು ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಶ್ರಮಿಸುವ ಮೂಲಕ ಶಾಲೆಗಳಲ್ಲಿ ಹಸಿರು ಪರಿಸರ ನಿರ್ಮಿಸಲು ಕಾರ್ಯೋನ್ಮುಖ ರಾಗಬೇಕು ಎಂದರು.

ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾ ಧಿಕಾರಿಗಳಾದ ಮಹದೇವ್ ಮತ್ತು ಪರಶಿವಮೂರ್ತಿ, ಶಾಲೆಗಳಲ್ಲಿ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಹಮೀದ, ಕಾರ್ಯಕ್ರಮದ ತಾಲೂಕು ನೋಡಲ್ ಅಧಿಕಾರಿ ಕೆ. ಮೂರ್ತಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ. ಧರ್ಮಪ್ಪ ಇದ್ದರು.