ಸೋಮವಾರಪೇಟೆ, ಡಿ. 16: ಸಮೀಪದ ಐಗೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಹಾರ ಉತ್ಪಾದನಾ ಸಮಿತಿ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಭತ್ತ, ಕಾಫಿ ಬೆಳೆ ಕಟಾವು ನಡೆಯುತ್ತಿದ್ದು, ಕೀಟ ಬಾದೆ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಪರಿತಪಿಸುತ್ತಿದ್ದಾರೆ. ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ರೈತರ ಬೆಳೆಗೆ ಕಾಲುವೆಯಿಂದ ನೀರು ಹರಿಸುವಲ್ಲಿ ಕಿಡಿಗೇಡಿಗಳು ನಾಲೆಯ ಬದಿಯನ್ನು ಒಡೆದು ಹಾಕುತ್ತಿದ್ದು ಇದರಿಂದ ಹೆಚ್ಚಿನ ರೈತರಿಗೆ ತೊಂದರೆಯಾಗುತ್ತಿದೆ ಎಂದು ಲಿಂಗೇರಿ ರಾಜೇಶ ಆರೋಪಿಸಿದರು.
ರೈತರು ಬೆಳೆದ ಉತ್ಪನ್ನಗಳನ್ನು ಕಾಡಾನೆ, ಹಂದಿಗಳ ಹಾವಳಿಯೊಂದಿಗೆ, ಕೆಲವರು ಊರು ದನಗಳನ್ನು ಬಿಡುತ್ತಿರುವದರಿಂದ ನಷ್ಟವಾಗುತ್ತಿದೆ. ಕೀಟ ಬಾಧೆಯಿಂದ ಸಂಪೂರ್ಣ ಬೆಳೆ ನಾಶವಾಗುತ್ತಿರುವದರ ಬಗ್ಗೆ ಕೃಷಿ ಇಲಾಖೆಯವರು ಯಾವದೇ ಮುನ್ನೆಚ್ಚರಿಕೆ ವಹಿಸಿಲ್ಲ. ಸೈನಿಕ ಹುಳುವಿನ ಕಾಟದಿಂದ ಭತ್ತ ಬೆಳೆ ಸಂಪೂರ್ಣ ನಷ್ಟದಲ್ಲಿದೆ. ನಷ್ಟಕ್ಕೊಳಗಾದ ರೈತರಿಗೆ ಬೆಳೆ ನಷ್ಟ ನೀಡಬೇಕು. ಐಗೂರು ಗ್ರಾಮ ಪಂಚಾಯಿತಿಯ ಎಲ್ಲಾ ರೈತರನ್ನು ಸೇರಿಸಿ ಸಭೆ ನಡೆಸಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಡಿ.ಡಿ. ರಮೇಶ್, ಜಯಕಾಂತ್, ಕೆ.ಪಿ. ದಿನೇಶ್ ಮತ್ತಿತರರು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಡಿ.ಎಸ್. ಚಂಗಪ್ಪ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಯಾವದೇ ನಷ್ಟವಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲಕೃಷ್ಣ, ಡಿ.ಎಂ. ರಮೇಶ್, ಕೆ.ಪಿ. ರಾಯ್, ಮಂಜುಳ, ಪಾಂಚಾಲಿ ಮತ್ತಿತರರು ಉಪಸ್ಥಿತರಿದ್ದರು.