ಮಡಿಕೇರಿ, ಡಿ. 16: ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಕೇವಲ ರೂ. 25 ಸಾವಿರ ಅನುದಾನ ನೀಡಿದ್ದರಿಂದ ಕಾರ್ಯಕ್ರಮದಲ್ಲಿ ಕೆಲವು ಕೊರತೆಗಳು ಉಂಟಾಗಿತ್ತು ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಕಳೆದ ಸಾಲಿನಲ್ಲಿ ಯುವ ಜನೋತ್ಸವಕ್ಕೆ ರೂ. 1 ಲಕ್ಷ ಅನುದಾನವನ್ನು ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುತ್ತೋಲೆಯಂತೆ ಜಿಲ್ಲಾ ಮಟ್ಟದಿಂದ ವಿಭಾಗ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡುವಾಗ ಕೆಲವು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಸ್ಪರ್ಧೆಯಲ್ಲಿ ಜಿಲ್ಲೆಯ ಯುವಕ-ಯುವತಿ ಮಂಡಳಿಯ ಸದಸ್ಯರು ಭಾಗವಹಿಸುತ್ತಾರೆ.
ಆದರೆ ಇತ್ತೀಚೆಗೆ ಇಲಾಖೆಯ ಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ವಯೋಮಿತಿಯನ್ನು 15 ರಿಂದ 29 ಕ್ಕೆ ಸೀಮಿತಗೊಳಿಸಲಾಗಿದೆ. ಈ ಸಾಲಿನಲ್ಲಿ ನ. 30 ರಿಂದ ಮೂರು ದಿನಗÀಳ ಕಾಲ ಉಡುಪಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ನಡೆಯಿತು. ಯುವ ಒಕ್ಕೂಟ ಜಿಲ್ಲಾ ಮಟ್ಟದ ಯುವ ಜನೋತ್ಸವವನ್ನು ನ. 17 ರಂದು ನಡೆಸಿತ್ತು. ತಮ್ಮ ಪರಿಕರದೊಂದಿಗೆ ಆಗಮಿಸುವ ಯುವಕ-ಯುವತಿ ಮಂಡಳಿಯ ಸದಸ್ಯರಿಗೆ ಪ್ರಯಾಣ ಭತ್ಯೆಯನ್ನು ಇಲ್ಲಿಯವರೆಗೆ ನೀಡಲಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ರೂ. 75 ಸಾವಿರ ಕಡಿಮೆ ಅನುದಾನ ಬಿಡುಗಡೆಯಾದ ಕಾರಣ ಮತ್ತು ತುರ್ತಾಗಿ ಕಾರ್ಯಕ್ರಮ ನಡೆಸಬೇಕಾಗಿದ್ದರಿಂದ ಕೆಲವು ನ್ಯೂನತೆಗಳು ಉಂಟಾಗಿತ್ತು ಎಂದು ಜೋಯಪ್ಪ ತಿಳಿಸಿದ್ದಾರೆ.
ಭಾಗವಹಿಸುವ ಎಲ್ಲಾ ಸಭಿಕರಿಗೆ ಊಟ, ಕಾಫಿ, ತಿಂಡಿ ವ್ಯವಸ್ಥೆಯನ್ನು ಮಾಡುವಂತಿಲ್ಲ. ಭಾಗವಹಿಸುವ ಯುವ ಒಕ್ಕೂಟದ ಸದಸ್ಯರುಗಳಿಗೆ, ಸ್ಪರ್ಧಾಳುಗಳಿಗೆ ಹಾಗೂ ತೀರ್ಪುಗಾರರಿಗೆ ಮಾತ್ರ ಊಟ, ಕಾಫಿ, ತಿಂಡಿಯ ವ್ಯವಸ್ಥೆ ನೀಡುವ ಆದೇಶವಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಮಟ್ಟಕ್ಕೆ ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡುವ ಕೆಲಸ ಮಾತ್ರ ಯುವ ಒಕ್ಕೂಟಕ್ಕೆ ಇದ್ದು, ಅದರಂತೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಯುವ ಒಕ್ಕೂಟದ ಪದಾಧಿಕಾರಿಗಳು ಸ್ವತ: ಖರ್ಚು ವೆಚ್ಚವನ್ನು ಭರಿಸಿ ಸಂಬಂಧಪಟ್ಟ ಇಲಾಖೆಗೆ ಬಿಲ್ ನೀಡಲಾಗಿದೆ. ಬಿಲ್ ಮಾರ್ಚ್ ಅಂತ್ಯದೊಳಗೆ ದೊರೆಯುತ್ತದೆ ಜೋಯಪ್ಪ ಸ್ಪಷ್ಟಪಡಿಸಿದ್ದಾರೆ.