*ವಿರಾಜಪೇಟೆ, ಡಿ. 16: ಐತಿಹಾಸಿಕ ಹಿನ್ನೆಲೆ ಇರುವ ಕಾಕೋಟುಪರಂಬು ಕಾಲಭೈರವ ದೇವರ ಉತ್ಸವವು ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜರುಗಿ ಬೇತ್ರಿಯ ಕಾವೇರಿ ನದಿಯಲ್ಲಿ ಜಳಕ ಮಾಡುವದರೊಂದಿಗೆ ತಾ. 17ರಂದು (ಇಂದು) ತೆರೆ ಬೀಳಲಿದೆ.

ತಾ. 1ರಂದು ದೇವರ ಕಟ್ಟು ಬಿದ್ದು, ತಾ. 14ರವರೆಗೆ ಪೀಲಿ ಮಂದ್‍ನಲ್ಲಿ ರಾತ್ರಿ ಪೀಲಿಯಾಟ್ ನಡೆದವು. ತಾ. 15ರಂದು ಅಪರಾಹ್ನ 3 ಗಂಟೆಗೆ ಮರತ ತೆರೆ ನಡೆದ ನಂತರ ಅದೇ ದಿನ ರಾತ್ರಿ ದೇವಾಲಯದ ತಕ್ಕ ಮುಖ್ಯಸ್ಥ ತೋಣೂರು ಕೇರಿಯ ಅಮ್ಮಂಡಿರ ಕುಟುಂಬದಿಂದ ದೇವರ ಭಂಡಾರ ಬಂದ ನಂತರ ತಾ. 16 ರಂದು ಮುಂಜಾನೆ ಇರುಳು ಬೆಳಕು, ಬೊಳಕಾಟುವಿನೊಂದಿಗೆ ನೆರೆದಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.

ತಾ. 16 ರಂದು ಅಪರಾಹ್ನ 1 ಗಂಟೆಗೆ ಮೂಗೂರುಕೇರಿಯಿಂದ ದೇವರ ಕೊಡೆ, ಪಾಂಡಿಮಾಡುಕೇರಿಯಿಂದ ದೇವರ ಚೌರಿ ಹಾಗೂ ಪೆಮ್ಮಾಡು ಕೇರಿಯಿಂದ ದೇವರ ಬೆತ್ತದ ಕುದುರೆಯನ್ನು ತಂದು ದೇವಾಲಯಕ್ಕೆ ಒಪ್ಪಿಸಿ ದೇವರ ದರ್ಶನ ಪಡೆಯಲಾಯಿತು. ದೇವಾಲಯದಲ್ಲಿ ಬೊಳಕಾಟು, ಚಂಡೆ ವಾದ್ಯಗಳು ಮೊಳಗಿದವು.

ಸಂಜೆ 4 ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ಪಕ್ಕದಲ್ಲಿಯೇ ಇರುವ ಆಲದ ಮರದ ಸುತ್ತ 11 ಸುತ್ತು ಪ್ರದಕ್ಷಿಣೆ ಬರಲಾಯಿತು. ಅದೇ ಸಂದರ್ಭ ದೇವರ ಪ್ರದಕ್ಷಿಣೆಯನ್ನು ದೇವಾಲಯದ ಅನತಿ ದೂರದಲ್ಲಿಯೇ ವೀಕ್ಷಿಸುತ್ತಿದ್ದ ಚಾಮುಂಡಿ ದೇವರ 2 ಕೋಲಗಳು ಓಡಿ ಬಂದು ದೇವರನ್ನು ಸಂಹಾರ ಮಾಡಲು ಪ್ರಯತ್ನಿಸಿದರು ಅದಕ್ಕೆ ಅವಕಾಶ ದೊರೆಯಲಿಲ್ಲ. ಇಂತಹ ಆಚರಣೆಗಳು ಪೂರ್ವಜರ ಕಾಲದಿಂದಲೂ ನಡೆದು ಬರುತ್ತಿದೆ.

ಕಾಕೋಟುಪರಂಬು ಹಬ್ಬವನ್ನು ಎಲ್ಲಾ ಜನಾಂಗದವರು ಒಟ್ಟಿಗೆ ಆಚರಿಸುತ್ತಾರೆ. 15 ದಿನಗಳ ಕಾಲ ಕಟ್ಟು ಪಾಡುಗಳೊಂದಿಗೆ ಆಚರಿಸುವ ಈ ಹಬ್ಬದಲ್ಲಿ ನೂರಾರು ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಂಡಿದ್ದರು. ಹಬ್ಬದಲ್ಲಿ ಊರಿನಿಂದ ಹೊರಗೆ ಇರುವ ಎಲ್ಲಾ ಉದ್ಯೋಗಸ್ತರು, ಊರಿನ ಹೆಣ್ಣು ಮಕ್ಕಳು, ಬಂದು ಬಳಗದವರು ಪಾಲ್ಗೊಂಡಿದ್ದರು.

ಭಾನುವಾರ ಸಂಜೆ 4 ಗಂಟೆಗೆ ಬೇತ್ರಿಯ ಕಾವೇರಿ ಹೊಳೆಯಲ್ಲಿ ದೇವರ ಜಳಕ ಕಾರ್ಯ ನಡೆದು ರಾತ್ರಿ ದೇವಾಲಯದಲ್ಲಿ ಪೀಲಿಯಾಟ್ ನೊಂದಿಗೆ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯಲಾಗುವದು.