ಮಡಿಕೇರಿ, ಡಿ. 16: ಕೊಡವ ಸಂಸ್ಕøತಿ, ಆಚಾರ ವಿಚಾರ, ಭಾಷೆ ಕೊಡವ ಜನಾಂಗವೊಂದಕ್ಕೇ ಸೀಮಿತವಾಗಿಲ್ಲವೆಂದು ಅಭಿಪ್ರಾಯಪಟ್ಟಿರುವ ಕೊಡವ ಐರಿ ಸಮಾಜ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಐರಿ ಜನಾಂಗ ಹಾಗೂ ಕೊಡವ ಭಾಷೆಯನ್ನಾಡುವ ಇತರ ಮೂಲ ಜನಾಂಗಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಕಳೆದ ಕೆಲವು ವರ್ಷಗಳಿಂದ ಕೊಡವ ಸಾಹಿತ್ಯ ಅಕಾಡೆಮಿ ಐರಿ ಸಮಾಜವನ್ನು ಕಡೆಗಣಿಸುತ್ತಾ ಬರುತ್ತಿದ್ದು, ಇದನ್ನು ಖಂಡಿಸುವದಾಗಿ ಹೇಳಿದರು. ಕೊಡವ ಸಂಪ್ರದಾಯವನ್ನು ಎತ್ತಿ ಹಿಡಿಯುವಲ್ಲಿ ಐರಿ ಸಮಾಜ ಪ್ರಮುಖ ಪಾತ್ರ ವಹಿಸಿದ್ದು, ಪೀಚೆಕತ್ತಿ, ಜೋಮಾಲೆ, ಪತ್ತಾಕ್ ಮೊದಲಾದ ಕೊಡವ ಸಾಂಪ್ರದಾಯಿಕ ಆಭರಣಗಳನ್ನು ಐರಿ ಸಮಾಜದ ಬಂಧುಗಳೇ ತಯಾರಿಸುತ್ತಾರೆ. ಆದರೆ, ಈ ಜನಾಂಗಕ್ಕೆ ಅಕಾಡೆಮಿಯಲ್ಲಿ ಯಾವದೇ ಸ್ಥಾನಮಾನ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಮಾತನಾಡಿ, ಒಂದು ಜನಾಂಗದ ಶೇ. 5 ರಷ್ಟು ಮಂದಿಯಿಂದ 18 ಮೂಲ ನಿವಾಸಿ ಕೊಡವ ಜನಾಂಗದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜಕೀಯ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆಯೆಂದು ಆರೋಪಿಸಿದ ಅವರು, ಮೂಲ ನಿವಾಸಿ ಜನಾಂಗಗಳು ಮೂಲೆ ಗುಂಪಾಗುತ್ತಿದ್ದು, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅನಿವಾರ್ಯವಾಗಿ ಪ್ರಶ್ನಿಸಲೇಬೇಕಾಗುತ್ತದೆ ಎಂದು ತಿಳಿಸಿದರು.

ಸಮಾಜವನ್ನು ಒಡೆಯಲು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆಯೆ ಹೊರತು ಒಗ್ಗೂಡಿಸುವ ಕಾರ್ಯ ನಡೆಯುತ್ತಿಲ್ಲವೆಂದು ಆರೋಪಿಸಿದರು.

ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕೇವಲ ಕೊಡವರಿಗೆ ಮಾತ್ರ ಸೀಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಕೊಡವ ಭಾಷಿಕರ ಹೋರಾಟದ ಫಲವಾಗಿ ಕೊಡವ ಭಾಷಿಕ ಇತರೆ ಜನಾಂಗಗಳವರಿಗೆ ಅಕಾಡೆಮಿಯಲ್ಲಿ ಮಾನ್ಯತೆ ನೀಡಲಾಗಿತ್ತು. ಆದರೆ, ಕಳೆದ ಅಕಾಡೆಮಿಯ ಆಡಳಿತ ಮಂಡಳಿಯ ಅವಧಿಯಲ್ಲಿ ಅಧ್ಯಕ್ಷರ ಕುತಂತ್ರದಿಂದಾಗಿ ಕೊಡವ ಭಾಷಿಕ ಇತರ ಜನಾಂಗದವರಿಗೆ ಪ್ರಾತಿನಿಧ್ಯ ನೀಡದೆ ಕೊಡವ ಜನಾಂಗದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 101 ಕಾರ್ಯಕ್ರಮಗಳನ್ನು ನಡೆಸಿದ್ದರೂ ಒಂದೇ ಒಂದು ಆಹ್ವಾನ ಪತ್ರಿಕೆ ಐರಿ ಸಮಾಜಕ್ಕೆ ತಲುಪಿಲ್ಲವೆಂದು ಟೀಕಿಸಿದರು.

ವಿಶ್ವ ಪ್ರಸಿದ್ಧಿಯನ್ನು ಪಡೆದ ಕೊಡಗಿನ ವಾಲಗ ಕೆಂಬಟ್ಟಿ ಜನಾಂಗದ ಕೊಡುಗೆಯಾಗಿದ್ದು, ಕೊಡವ ಸಂಸ್ಕøತಿಯ ಉಳಿವಿಗೆ ಕೊಡವ ಭಾಷಿಕ 18 ಮೂಲ ನಿವಾಸಿಗಳು ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಆದರೆ, ಇವರನ್ನೂ ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಐರೀರ ಬೋಪಯ್ಯ ಉಪಸ್ಥಿತರಿದ್ದರು.