ಮಡಿಕೇರಿ, ಡಿ. 16: ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಸಿದ್ದಲಿಂಗಪುರದಲ್ಲಿ ಕೇರಳದ ಕಣ್ಣೂರು ಮೂಲದ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಮೀಸಲು ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ನೂತನ ಕೊಡಗು ಪರಿಸರ ಸಂರಕ್ಷಣಾ ಹೋರಾಟ ಆಕ್ಷನ್ ಕಮಿಟಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕಿಶೋರ್ ಕೆ. ವಾಸು, ಮುಂದಿನ 15 ದಿನಗಳೊಳಗೆ ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಕಳೆದ ಹಲವು ತಿಂಗಳುಗಳಿಂದ ನಿಯಮ ಬಾಹಿರವಾಗಿ ಮೀಸಲು ಅರಣ್ಯ ಭಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಗಣಿಗಾರಿಕೆಯಿಂದಾಗಿ ಅಪಾಯ ಸಂಭವಿಸುವ ಸಾಧ್ಯತೆಗಳಿದ್ದು, ವನ್ಯಜೀವಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯವನ್ನು ತೊರೆಯುತ್ತಿರುವ ಪ್ರಾಣಿಗಳು ಗ್ರಾಮಕ್ಕೆ ಲಗ್ಗೆ ಇಟ್ಟು ರೈತರು ಬೆಳೆದ ಫಸಲನ್ನು ನಾಶ ಮಾಡುತ್ತಿವೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಪಕ್ಕದಲ್ಲೇ ದೇವಾಲಯವೊಂದಿದ್ದು, ಹಾನಿಯಾಗುವ ಆತಂಕವಿದೆ.

ಇದೇ ಭಾಗದಲ್ಲಿದ್ದ ಶಿವನ್ ಎಂಬುವವರಿಗೆ ಸೇರಿದ ಮನೆಯನ್ನು ಹಕ್ಕುಪತ್ರವಿದ್ದರೂ ಯಾವದೇ ಪರಿಹಾರ ನೀಡದೆ ಒಡೆದು ಹಾಕಲಾಗಿದೆ. ಗಣಿಗಾರಿಕೆ ಪ್ರದೇಶ ದಲ್ಲಿದ್ದ ಗಂಧದ ಮರಗಳನ್ನು ಕೂಡ ಕಡಿದು ಹಾಕಲಾಗಿದೆ ಎಂದು ಕಿಶೋರ್ ಕೆ. ವಾಸು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿ ಗಳಿಗೆ ದೂರು ನೀಡಿದ ಸಂದರ್ಭ ಸೂಕ್ತ ಕ್ರಮದ ಭರವಸೆ ದೊರೆಯಿ ತ್ತಾದರೂ ಇಲ್ಲಿಯವರೆಗೆ ಯಾವದೇ ಅಧಿಕಾರಿ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮುಂದಿನ 15 ದಿನಗ ಳೊಳಗೆ ಗಣಿಗಾರಿಕೆಯನ್ನು ಸ್ಥಗಿತ ಗೊಳಿಸದಿದ್ದಲ್ಲಿ ಗ್ರಾಮಸ್ಥರ ಸಹಕಾರ ದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಅವರು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಹೆಚ್.ಎ. ಷಂಶುದ್ದೀನ್, ಸದಸ್ಯರುಗಳಾದ ಪಿ.ಎಸ್. ರವಿ ಹಾಗೂ ಕೆ.ಟಿ. ಶಾಜಿ ಉಪಸ್ಥಿತರಿದ್ದರು.