ನಾಪೆÇೀಕ್ಲು, ಡಿ. 16: ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ ಉಲ್ಬಣಗೊಂಡಿದೆ. ಜಿಲ್ಲೆಯಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಅಸ್ಸಾಂ ಕಾರ್ಮಿಕರು ಗುರುತಿನ ಚೀಟಿ ಪಡೆಯುವ ಕಾರಣದಿಂದ ತಮ್ಮ ರಾಜ್ಯಕ್ಕೆ ಹಿಂತಿರುಗಿದ್ದಾರೆ. ಇದರಿಂದ ಜಿಲ್ಲೆಯ ಬೆಳೆಗಾರರು ಅತಂತ್ರದ ಸ್ಥಿತಿ ಎದುರಿಸುವಂತಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ಅಸ್ಸಾಂ ಸರಕಾರದೊಂದಿಗೆ ಈ ಬಗ್ಗೆ ಸಮಾಲೋಚಿಸಿ ಕಾರ್ಮಿಕರು ಕೊಡಗಿಗೆ ಹಿಂದಿರುಗುವರೋ? ಇಲ್ಲವೋ? ಎಂಬ ಸಂದೇಶವನ್ನು ಕೊಡಗಿನ ಕಾಫಿ ಬೆಳೆಗಾರರಿಗೆ ನೀಡಬೇಕೆಂದು ಕೊಡಗು ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ಹಾಗೂ ಮಡಿಕೇರಿ ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಈ ಹಿಂದೆ ಬೆಂಗಳೂರಿನಲ್ಲಿ ಕಾರ್ಮಿಕರ ಸಮಸ್ಯೆ ತಲೆದೋರಿದ ಸಂದರ್ಭ ಆಗಿನ ರಾಜ್ಯದ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅಸ್ಸಾಂ ಸರಕಾರದೊಂದಿಗೆ ವ್ಯವಹರಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಿದರು. ಈಗಲೂ ಸಂಸದರು ಈ ಕಾರ್ಯವನ್ನು ಕೈಗೊಂಡು ಜಿಲ್ಲೆಯ ಜನತೆಗೆ ನೆರವಾಗಬೇಕು ಎಂದರು.

ಜಿಲ್ಲೆಯಲ್ಲಿ ದೊಡ್ಡ ಬೆಳೆಗಾರರನ್ನು ಹೊರತುಪಡಿಸಿ ಇತರ ಎಲ್ಲಾ ಬೆಳೆಗಾರರು ಹೊರ ರಾಜ್ಯದ ಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಈ ವರ್ಷ ಕಾಫಿ ಫಸಲು ಅವಧಿಗೆ ಮುಂಚೆಯೇ ಹಣ್ಣಾದ ಕಾರಣ ಕಾರ್ಮಿಕರ ಸಮಸ್ಯೆ ತಲೆದೋರಿದೆ. ಇದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಹಾಗೂ ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿ ನೀಡುವದರ ಮೂಲಕ ಜಿಲ್ಲೆಯ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಕ್ರಮ ಕೈಗೊಳ್ಳಬೇಕು ಎಂದರು.