ಒಡೆಯನಪುರ, ಡಿ. 16: ನಿಡ್ತ ಗ್ರಾ.ಪಂ.ಗೆ ಸೇರಿದ ಮುಳ್ಳೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ವಿರುದ್ಧ ಮುಳ್ಳೂರು ಗ್ರಾಮದ ಮದ್ಯಪಾನ ವಿರೋಧಿ ಸಮಿತಿ ವತಿಯಿಂದ ಮಹಿಳೆಯರು ನಿಡ್ತ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ ಮೂರು ನಾಲ್ಕು ವರ್ಷಗಳಿಂದ ಮುಳ್ಳೂರು, ಜಾಗನಹಳ್ಳಿ, ನಿಡ್ತ, ಹೊನ್ನೆಕೊಪ್ಪಲು, ಹಿತ್ಲಕೇರಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಹೆಚ್ಚಾಗುತ್ತಿದ್ದು, ಕುಡಿತಕ್ಕೆ ಒಳಗಾದ ಪುರುಷರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಮಾಡುವವರೊಂದಿಗೆ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಎಂಎಲ್‍ಸಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ವರಿಷ್ಠಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್, ಸಿಐ, ಶನಿವಾರಸಂತೆ ಎಸ್‍ಐ, ನಿಡ್ತ ಗ್ರಾ.ಪಂ. ಪಿಡಿಒ ಇವರುಗಳಿಗೆ ಮನವಿ ಪತ್ರ ನೀಡಿದ್ದರು. ಈ ಹಿನೆÀ್ನಲೆಯಲ್ಲಿ 2 ವಾರದ ಹಿಂದೆ ಸೋಮವಾರಪೇಟೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವ ನಾಟಕವಾಡಿ ಆತನನ್ನು ಬಂಧಿಸದೆ ಬಿಟ್ಟಿದ್ದಾರೆ ಎಂಬವದು ಗ್ರಾಮಸ್ಥರ ಆರೋಪವಾಗಿದೆ.

ಸ್ಥಳಕ್ಕೆ ಅಬಕಾರಿ ಇಲಾಖೆಯ ಜಿಲ್ಲಾ ಅಧೀಕ್ಷಕರು ಬರುವಂತೆ ಪ್ರತಿಭಟನೆಕಾರರು ಆಗ್ರಹಿಸಿದರು. ಮಧ್ಯಾಹ್ನ 2 ಗಂಟೆ ವೇಳೆಗೆ ಸೋಮವಾರಪೇಟೆ ಅಬಕಾರಿ ಇನ್ಸ್‍ಪೆಕ್ಟರ್ ಗಣೇಶ್ ಆಗಮಿಸಿದಾಗ ರೊಚ್ಚಿಗೆದ್ದ ಪ್ರತಿಭಟನೆ ನಿರತ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಪ್ರತಿಭಟನೆಕಾರರ ಸಭೆ ನಡೆಯಿತು. ಈ ಸಂದರ್ಭ ನಿಡ್ತ ಗ್ರಾ.ಪಂ. ಅಧ್ಯಕ್ಷ ಮುಸ್ತಾಪ ಪ್ರತಿಭಟನೆ ನಿರತ ಮಹಿಳೆಯರ ಬೆಂಬಲಕ್ಕೆ ನಿಂತು ಅಬಕಾರಿ ಇನ್ಸ್‍ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಮಾಡುವವರೊಂದಿಗೆ ಶಾಮೀಲಾಗಿದ್ದೀರ, ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದರೂ ತಡವಾಗಿ ಬಂದಿದೀರಿ, ಅಕ್ರಮ ಮದ್ಯ ಮಾರಾಟ ದಂಧೆಯನ್ನು ನಿಯಂತ್ರಗೊಳಿಸಲು ವಿಫಲರಾಗಿದ್ದೀರಿ ಎಂದು ಇನ್ಸ್‍ಪೆಕ್ಟರ್ ವಿರುದ್ಧ ಪ್ರತಿಭಟನೆಕಾರರು ಹರಿಹಾಯ್ದರು. ಇದರಿಂದ ಅವರು ತಬ್ಬಿಬ್ಬಾದರು. ಕೊನೆಗೆ ಅಬಕಾರಿ ಅಧಿಕಾರಿ ಇನ್ನೂ 15 ದಿವಸದ ಒಳಗಡೆ ದಂಧೆಗೆ ಕಡಿವಾಣ ಹಾಕುತ್ತೇವೆ. ಮದ್ಯ ಮಾರಾಟ ಮಾಡುವವರ ವಿರುದ್ಧ ಕೇಸು ದಾಖಲಿಸಲಾಗುವದೆಂದು ಭರವಸೆ ನೀಡಿದರು. ಅಧಿಕಾರಿ ನೀಡಿದ ಆಶ್ವಾಸನೆಯನ್ನು ಮುಚ್ಚಳಿಕೆಯಿಂದ ಬರೆಸಿಕೊಂಡ ನಂತರ ಪ್ರತಿಭಟನೆ ಯನ್ನು ಹಿಂತೆಗೆದುಕೊಳ್ಳಲಾಯಿತು.

ಮುಳ್ಳೂರು ಗ್ರಾಮದ ಮದ್ಯಪಾನ ವಿರೋಧಿ ಸಮಿತಿ ಅಧ್ಯಕ್ಷೆ ಸುಧಾಮಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವನಜಾಕ್ಷಿ , ರೂಪ, ಕಾವ್ಯ, ಜಯಂತಿ, ಮಣಿ, ಮಲ್ಲಿಗೆ, ಲೀಲಾ, ಸುವರ್ಣ, ಸುಮ, ಎಂ.ಸಿ. ಚಂದ್ರಶೇಖರ್, ಸುಬ್ಬಪ್ಪ, ಗ್ರಾ.ಪಂ. ಸದಸ್ಯರುಗಳಾದ ವಿಜಯ್‍ಕುಮಾರ್, ಉಪಾಧ್ಯಕ್ಷೆ ಕಾಳಮ್ಮ, ಪವಿತ್ರ, ಹೂವಮ್ಮ ಮುಂತಾದವರಿದ್ದರು.

-ವಿ.ಸಿ.ಸುರೇಶ್ ಒಡೆಯನಪುರ