ಮಡಿಕೇರಿ, ಡಿ. 16: ಇಪ್ಪತ್ತು ತಿಂಗಳ ಹಿಂದೆಯಷ್ಟೇ ಪ್ರಾರಂಭಗೊಂಡಿರುವ ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷರಾಗಿ ಕರಿಕೆಯ ಕೋಡಿ ಪೊನ್ನಪ್ಪ ಹಾಗೂ ಉಪಾಧ್ಯಕ್ಷರಾಗಿ ಚೇರಂಬಾಣೆಯ ಬೊಪ್ಪಡತಂಡ ಕಿಶೋರ್ ಅವರುಗಳು ಆಯ್ಕೆಗೊಂಡಿದ್ದಾರೆ.

ಕಳೆದ ವರ್ಷ ಮಾರ್ಚ್ 7 ರಂದು ಪ್ರಾರಂಭಗೊಂಡಿರುವ ಈ ಸಂಸ್ಥೆಯಲ್ಲಿ ಸುಮಾರು 19 ತಿಂಗಳ ಅವಧಿಗೆ ಸೇವೆ ಸಲ್ಲಿಸಿರುವ ಸತೀಶ್ ಕುಮಾರ್ ಹುದ್ದೆ ತೊರೆದು ಇದುವರೆಗೆ ಉಪಾಧ್ಯಕ್ಷರಾಗಿದ್ದ ಕೋಡಿ ಪೊನ್ನಪ್ಪ ಅಧ್ಯಕ್ಷರಾಗಿದ್ದಾರೆ.

ಜಿಲ್ಲೆಯಲ್ಲಿ ವಿಶೇಷವಾಗಿ ರೈತರು ಬೆಳೆಯುವ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನೇರವಾಗಿ ಮುಕ್ತ ಮಾರುಕಟ್ಟೆ ಕಲ್ಪಿಸುವದು ಮತ್ತು ಕೃಷಿಗೆ ಪ್ರೋತ್ಸಾಹಿಸುವ ಸದುದ್ದೇಶದಿಂದ, ಒಂದು ಸಾವಿರಕ್ಕೂ ಅಧಿಕ ಮಂದಿ ರೈತರು ತಲಾ ರೂ. ಒಂದು ಸಾವಿರದಂತೆ ಹೂಡಿಕೆಯೊಂದಿಗೆ, ಕೇಂದ್ರ ತೋಟಗಾರಿಕಾ ಮಂಡಳಿ ಹಾಗೂ ಸರಕಾರದ ಪಾಲು ಹಣದೊಂದಿಗೆ ಸಂಸ್ಥೆ ಹುಟ್ಟು ಹಾಕಲಾಗಿತ್ತು.

ಒಟ್ಟು ಹದಿನೈದು ಮಂದಿಯ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯ ಕಾರ್ಯ ತಂಡ 20 ತಿಂಗಳಲ್ಲಿ ವಾರ್ಷಿಕ ಸುಮಾರು ಎರಡು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ನೂತನ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಭಾಗಮಂಡಲ ಜೇನು ಕೃಷಿ ಸಂಸ್ಥೆಯ ಹಳೆಯ ಕಟ್ಟಡವನ್ನು ಪ್ರಸಕ್ತ ಮುಖ್ಯ ಕಚೇರಿಯಾಗಿ ಹೊಂದಿದ್ದು, ಕರಿಕೆ ಹಾಗೂ ಚೇರಂಬಾಣೆಯಲ್ಲಿ ಉಪ ಶಾಖೆಗಳನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಇಂತಹ 78 ಸಂಸ್ಥೆಗಳಲ್ಲಿ ಪ್ರಸಕ್ತ ಭಾಗಮಂಡಲ ಸಂಸ್ಥೆ 2ನೇ ಸ್ಥಾನಕ್ಕೆ ಪ್ರಗತಿ ಕಂಡಿದೆ ಎಂದು ತಿಳಿಸಿರುವ ಪೊನ್ನಪ್ಪ, ಜಿಲ್ಲೆಯ ರೈತರ ಬೆಂಬಲದಿಂದ ಶೀಘ್ರವೇ ಪ್ರಥಮ ಸ್ಥಾನಕ್ಕೆ ಏರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.