ಮಡಿಕೇರಿ, ಡಿ.17 : ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಗುತ್ತಿಗೆದಾರ ಸಂಸ್ಥೆಯಿಂದ ನಿಯಮನುಸಾರ ವೇತನ ಪಾವತಿಯಾ ಗುತ್ತಿಲ್ಲವೆಂದು ಆರೋಪಿಸಿರುವ ನಗರದ ಜಿಲ್ಲಾ ಆಸ್ಪತ್ರೆಯ ನೌಕರರು ಡಿ.18 ರೊಳಗೆ ಬಾಕಿ ವೇತನ ನೀಡದೆ ಇದ್ದಲ್ಲಿ ಡಿ.19 ರಿಂದ ಕೆಲಸ ಸ್ಥಗಿತಗೊಳಿಸಿ ಉಪವಾಸ ಸತ್ಯಾಗ್ರಹ ನಡೆಸುವದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.
ದಿನಗೂಲಿ ನೌಕರರಿಗೆ ಕಳೆದ ಕೆಲವು ತಿಂಗಳುಗಳಿಂದ ಕ್ರಮಬದ್ಧವಾಗಿ ವೇತನ ಪಾವತಿಯಾಗಿಲ್ಲ, ಪಿ.ಎಫ್ ಬಗ್ಗೆ ಮಾಹಿತಿ ನೀಡುತ್ತಿಲ್ಲ. ನಮ್ಮ ದುಡಿಮೆಗೆ ಬೆಲೆಯೇ ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನೌಕರರು ಕಳೆದೆರೆಡು ದಿನಗಳ ಹಿಂದೆ ವೇತನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಂದರ್ಭ ತಾ.16 ರಂದು ಬಾಕಿ ವೇತನ ಪಾವತಿಸುವದಾಗಿ ಗುತ್ತಿಗೆದಾರ ಸಂಸ್ಥೆ ಭರವಸೆ ನೀಡಿತ್ತು. ಆದರೆ ಕೆಲವರಿಗೆ ಮಾತ್ರ ಚೆಕ್ ನೀಡಲಾಗಿದೆ ಎಂದು ಆರೋಪಿಸಿದರು.
ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್.ಭರತ್ಕುಮಾರ್ ಸ್ಥಳದಲ್ಲಿ ಹಾಜರಿದ್ದು, ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡರು. ಸುಮಾರು 70 ಮಂದಿ “ಡಿ” ಗ್ರೂಪ್ ನೌಕರರಿಗೆ ಮಾತ್ರ ಬಾಕಿ ವೇತನ ನೀಡಲಾಗಿದೆ. ಸಫಾಯಿ ಕರ್ಮಚಾರಿ, ಅಡುಗೆಯ ವರು, ಲ್ಯಾಬ್ ಟೆಕ್ನಿಷೀಯನ್, ಸೆಕ್ಯುರಿಟಿ ಗಾರ್ಡ್ಗಳಿಗೆ ಇನ್ನೂ ಕೂಡ ವೇತನ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರ ಸಂಸ್ಥೆ ಬಡ ನೌಕರರಿಂದ ಕಾನೂನಿಗೆ ವಿರುದ್ಧವಾಗಿ ಭದ್ರತಾ ಠೇವಣಿ ಸಂಗ್ರಹಿಸಿದ್ದು, ಇದನ್ನು ತಕ್ಷಣ ಮರಳಿಸಬೇಕೆಂದು ಭರತ್ ಕುಮಾರ್ ಒತ್ತಾಯಿಸಿದರು.
ಬಾಕಿ ಉಳಿದ ನೌಕರರಿಗೆ ಡಿ.18 ರಂದು ವೇತನ ನೀಡುವದಾಗಿ ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿ ಭರವಸೆ ನೀಡಿದ್ದಾರೆ ಎಂದು ತಿಳಿಸಿರುವ ಅವರು ಭರವಸೆ ಈಡೇರದಿದ್ದರೆ ನೌಕರರು ಕೆಲಸ ಸ್ಥಗಿತಗೊಳಿಸಲಿದ್ದಾರೆ ಎಂದರು. ಇನ್ನೂರಕ್ಕೂ ಅಧಿಕ ಮಂದಿ ನೌಕರರು ದುಡಿಯುತ್ತಿದ್ದಾರೆ. ವೇತನ ಪಾವತಿಯಲ್ಲೂ ತಾರತಮ್ಯ ತೋರಲಾಗುತ್ತಿದೆ. ಕಾರ್ಮಿಕ ಇಲಾಖೆ ನಿಯಮÁನುಸಾರ 11 ಸಾವಿರ ರೂ.ವೇತನ ಸಿಗಬೇಕು, ಆದರೆ ಗುತ್ತಿಗೆದಾರ ಸಂಸ್ಥೆ ಕೇವಲ 6 ಸಾವಿರ ರೂ. ಮಾತ್ರ ಪಾವತಿಸುತ್ತಿದೆ ಎಂದು ಭರತ್ ಕುಮಾರ್ ಆರೋಪಿಸಿದರು.
ಸಕಾಲದಲ್ಲಿ ವೇತನ ಪಾವತಿಯಾಗದೆ ಇರುವದರಿಂದ ಬಡಕುಟುಂಬಗಳು ಮನೆ ಬಾಡಿಗೆ ಕಟ್ಟಲಾಗದೆ ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ಖರೀದಿಸಲಾಗದೆ ಪರಿತಪ್ಪಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 70 ನೌಕರರಿಗೆ ನೀಡಲಾಗಿರುವ ಚೆಕ್ನ್ನು ಇದೇ ಸಂದರ್ಭ ವಿತರಿಸಲಾಯಿತು. ಆಸ್ಪತ್ರೆಯ ಅಧಿಕಾರಿಗಳು ಹಾಗೂ ದಿನಗೂಲಿ ನೌಕರರು ಹಾಜರಿದ್ದರು.