ಮಡಿಕೇರಿ, ಡಿ. 17: ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋ ತಳಿಗಳ ಸಂರಕ್ಷÀಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವದಕ್ಕಾಗಿ ಹಕ್ಕೊತ್ತಾಯ ಮಂಡಿಸುವ ಉದ್ದೇಶದಿಂದ ಬೃಹತ್ ಜನಾಂದೋಲನದ ‘ಅಭಯ ಗೋ ಯಾತ್ರೆ’ಗೆ ತಾ. 3 ರಂದು ಕುಮಟಾದಲ್ಲಿ ಚಾಲನೆ ದೊರಕಿದ್ದು, ಕೊಡಗಿಗೆ ಯಾತ್ರೆ ಜನವರಿ 4 ರಂದು ಆಗಮಿಸಲಿದೆಯೆಂದು ಕೊಡಗು ಗೋ ಪರಿವಾರ ಟ್ರಸ್ಟ್‍ನ ಕಾರ್ಯದರ್ಶಿ ಡಾ. ರಾಜಾರಾಮ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂಸಾ ಮಾರ್ಗದ ಮೂಲಕ ಗೋ ಸಂರಕ್ಷಣೆಯ ಸಂದೇಶವನ್ನು ದೇಶಕ್ಕೆ ಸಾರುವಲ್ಲಿ ಇದು ಮಹತ್ವದ್ದಾಗಿದೆ. ರಾಜ್ಯದಲ್ಲಿ ಆರಂಭವಾಗಿರುವ ಈ ಆಂದೋಲನ ಮುಂದಿನ ದಿನಗಳಲ್ಲಿ ದೇಶದ ಇತರ ಭಾಗಗಳಿಗೂ ವ್ಯಾಪಿಸಿ ಗೋ ಹತ್ಯೆಯನ್ನು ಸಂಪೂರ್ಣ ನಿಷೇಧಿಸುವದು ಅನಿವಾರ್ಯ ಎನ್ನುವ ವಾತಾವರಣ ಅಭಿಯಾನ ದಿಂದ ಸೃಷ್ಟಿಯಾಗಲಿದೆಯೆಂದು ಡಾ. ರಾಜಾರಾಮ್ ವಿಶ್ವಾಸ ವ್ಯಕ್ತಪಡಿಸಿದರು.

ಗೋ ಸಂಪತ್ತಿನ ಸಂರಕ್ಷಣೆ ಆರ್ಥಿಕವಾಗಿಯೂ ಲಾಭದಾಯಕ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದ್ದು, ಹಾಲು, ಹಾಲಿನ ಉತ್ಪನ್ನ, ಗೋ ಮೂತ್ರ, ಗೋಮಯಗಳ ಮೌಲ್ಯವರ್ಧನೆ ಬಗ್ಗೆ ಜಾಗೃತಿ ಮೂಡಿಸಿ ರೈತರಿಗೆ ಆರ್ಥಿಕ ಲಾಭದ ಬಗ್ಗೆ ಮನವರಿಕೆ ಮಾಡಿಕೊಡಲಾಗುವದೆಂದರು. ಗೋ ಹತ್ಯೆ ನಿಷೇಧ ಹಾಗೂ ಭಾರತೀಯ ಗೋ ತಳಿಗಳ ಸಂವರ್ಧನೆ ಕುರಿತು ಸಂವಿಧಾನದ ಮೂಲ ಆಶಯವನ್ನು ಜಾರಿಗೊಳಿಸಲೇಬೇಕೆಂದು ಆಡಳಿತ ವರ್ಗದ ಮೇಲೆ ಒತ್ತಡ ಹೇರುವದು ಆಂದೋಲನದ ಉದ್ದೇಶವಾಗಿದೆ. ರಾಜ್ಯದಲ್ಲಿ ಪ್ರತಿ ಮನೆಗಳನ್ನು ತಲುಪುವ ಅಭಯಾಕ್ಷರ ಅಭಿಯಾನದಲ್ಲಿ ಸುಮಾರು 5 ಕೋಟಿಗೂ ಹೆಚ್ಚಿನ ಮಂದಿ ಗೋ ಸಂರಕ್ಷಣೆ ಪರವಾಗಿ ಹಸ್ತಾಕ್ಷರ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ. ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗುವ ಸಹಿ ಮಾಡಿದ ಅರ್ಜಿಗಳನ್ನು ಕೂಡ ಮೆರವಣಿಗೆಯಲ್ಲಿ ಪ್ರದರ್ಶಿಸುವದು ಅಭಿಯಾನದ ವಿಶೇಷತೆ ಯಾಗಿದೆಯೆಂದು ತಿಳಿಸಿದರು.

ಗೋ ಅಭಯ ಯಾತ್ರೆ ಆಂದೋಲನದ ಉಸ್ತುವಾರಿ ಮಂಗಳೂರಿನ ನಾಗರಾಜ ಭಟ್ ಮಾತನಾಡಿ, ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ 1 ಕೋಟಿ ಸಹಿ ಸಂಗ್ರಹದ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಈಗಾಗಲೆ 35 ಲಕ್ಷ ಮಂದಿ ಸಹಿ ಮಾಡಿದ್ದಾರೆ.

ಜಾತಿ , ಧರ್ಮ, ಪಕ್ಷ ರಾಜಕೀಯವನ್ನು ಮೀರಿದ ಅಭಯಾಕ್ಷರ ಅಭಿಯಾನ ನಡೆಯುತ್ತಿದ್ದು, ಈ ಅಭಿಯಾನದಲ್ಲಿ ಅಭಯ ರಥ, ಸಂದೇಶ ರಥ ಹಾಗೂ ಅಗ್ರ ರಥಗಳು ಸಾಗಲಿವೆ. ಗೋವುಗಳಿಗೆ ಆತಂಕ ಮುಕ್ತ ಪರಿಸರವನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಹಸುವಿನ ಹಾಲು ಸೇವಿಸುವ ಪ್ರತಿಯೊಬ್ಬರು ಸಹಿ ಮಾಡಬೇಕೆಂದು ಮನವಿ ಮಾಡಿದರು. ಗೋ ಸಂರಕ್ಷಣೆÉಯ ವಿಚಾರದಲ್ಲಿ ಜನಾಭಿಪ್ರಾಯವೇ ಮುಖ್ಯವಾಗಿದ್ದು, ಬಹುಸಂಖ್ಯಾತರು ವೈಯಕ್ತಿಕ ಪತ್ರದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರೆ ನೀಡಿದರು.

ಕೊಡಗಿಗೆ ಆಗಮಿಸುವ ಅಭಯ ಗೋ ಯಾತ್ರೆಗೆ ಕುಶಾಲನಗರದಲ್ಲಿ ಭವ್ಯ ಸ್ವಾಗತ ಕೋರಲಾಗುವದು. ನಂತರ ಸುಂಟಿಕೊಪ್ಪ, ಮಾದಾಪುರ, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ, ಚೆಯ್ಯಂಡಾಣೆÉ, ನೆಲ್ಲಿಹುದಿಕೇರಿ ಮೂಲಕ ರಥಯಾತ್ರೆ ಸಂಚರಿಸಲಿದೆ. ಅಂದು ಸಂಜೆ ನೆಲ್ಲಿಹುದಿಕೆÉೀರಿಯ ಶ್ರೀ ಆಂಜನೇಯ ದೇವಾಲಯದ ಎದುರು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಸಿದ್ದಾಪುರದ ಶ್ರೀ ರಾಮಮಂದಿರದ ವರೆಗೆ ಯಾತ್ರೆ ಮುಂದುವರಿಯಲಿದೆ. ನಂತರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆಂದು ನಾಗರಾಜ್ ಭಟ್ ಮಾಹಿತಿ ನೀಡಿದರು.

ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಖಜಾಂಚಿ ಅನಿತಾ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಗೋ ಶಾಲೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು. ನಗರದ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ಅಭಯಾಕ್ಷರವನ್ನು ಆರಂಭಿಸಲಾಗಿದ್ದು, ಸರ್ವರು ಸಹಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಹಕರಿಸಬೇಕೆಂದರು.

ಗೋಷ್ಠಿಯಲ್ಲಿ ಸದಸ್ಯ ಎ. ಸಂತೋಷ್ ಉಪಸ್ಥಿತರಿದ್ದರು.