ಗೋಣಿಕೊಪ್ಪಲು, ಡಿ. 17: ಶಿಕ್ಷಣ ಸಂಸ್ಥೆಗಳು ದಾನಿಗಳ ಕೊಡುಗೆಯಿಂದ ಬಹಳಷ್ಟು ಪ್ರಗತಿ ಸಾಧಿಸಿವೆ. ಶೈಕ್ಷಣಿಕ ಪ್ರಗತಿಗೆ ದಾನಿಗಳ ಸಹಕಾರ ಅಪಾರ ವಾದುದು ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.

ಎಜುಕೇಷನ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿ ಅಧೀನದಲ್ಲಿ ನಡೆಯು ತ್ತಿರುವ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೂ ಕೂಡ ದಾನಿಗಳ ಸಹಕಾರ ಮತ್ತು ಆಡಳಿತ ಮಂಡಳಿಯ ಸೇವೆಯಿಂದ ವಿದ್ಯಾಸಂಸ್ಥೆಗೆ ಅಗತ್ಯವಿರುವ ಮೂಲ ಸೌಕರ್ಯ ಗಳನ್ನು ಒದಗಿಸಿಕೊಡಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅವರ ಅನುದಾನ ದಲ್ಲಿ ನೂತನ ವಾಚನಾಲಯ ಕೊಠಡಿ ನಿರ್ಮಿಸಲಾಗಿದೆ. ಹಲವು ದಾನಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾವಿರಾರು ರೂಪಾಯಿ ದತ್ತಿ ನಿಧಿ ಇಟ್ಟು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.

ಸದಸ್ಯ ಪೋಡಮಾಡ ಸುಖೇಶ್ ಮಾತನಾಡಿ, ಆರ್ಥಿಕ ಸಮಸ್ಯೆಯ ಪರಿಹಾರಕ್ಕೆ ಹಳೆ ವಿದ್ಯಾರ್ಥಿ ಸಂಘವನ್ನು ಕ್ರಿಯಾಶೀಲ ಗೊಳಿಸಬೇಕು. ಹಳೆ ವಿದ್ಯಾರ್ಥಿ ಗಳಿಂದ ಒಂದಷ್ಟು ವಂತಿಕೆ ಪಡೆದು ಹಣಕಾಸಿನ ಸ್ಥಿತಿಗತಿಯನ್ನು ಉತ್ತಮ ಪಡಿಸಬೇಕು ಎಂದು ಸಲಹೆ ನೀಡಿದರು.

ಮಲಚೀರ ಪೊನ್ನಪ್ಪ, ಕಳ್ಳಿಚಂಡ ಪ್ರಕಾಶ್, ಬಲ್ಲಿಮಾಡ ತಿಲಕ್ ಮಾತನಾಡಿದರು. ಸೊಸೈಟಿ ಉಪಾಧ್ಯಕ್ಷ ಕೆ.ಎಸ್. ಉದಯ ಉತ್ತಪ್ಪ, ಕೆ.ಬಿ. ರಾಜ, ಸಹಕಾರ್ಯದರ್ಶಿ ಪಿ.ಎಂ. ಮೋಹನ್, ಖಜಾಂಚಿ ಎ.ಬಿ. ದೇವಯ್ಯ, ಸಹ ಖಜಾಂಚಿ ಎ.ಎಸ್. ಕುರುಂಬಯ್ಯ, ನಿರ್ದೇಶಕರಾದ ಎಂ.ಎ. ಸುಜಾ ಪೂಣಚ್ಚ, ಎ.ಸಿ. ಸುಬ್ಬಯ್ಯ, ಎಂ.ಎ. ಪೆಮ್ಮಯ್ಯ, ಎ.ಎಸ್. ಸಜನ್, ಆಜೀವ ಸದಸ್ಯ ಪಿ.ಕೆ. ನಾಚಪ್ಪ, ಪ್ರಾಂಶುಪಾಲೆ ಕೆ.ಪಿ. ಪೊನ್ನಮ್ಮ, ಹಿರಿಯ ಶಿಕ್ಷಕ ಕೆ. ಚಂದ್ರಶೇಖರ್ ಹಾಜರಿದ್ದರು. ಕಾರ್ಯದರ್ಶಿ ಸಿ.ಎಸ್. ಕೃಷ್ಣ ಗಣಪತಿ ಸ್ವಾಗತಿಸಿದರು. ವಿದ್ಯಾರ್ಥಿನಿ ಯರಾದ ಬಿಂದು, ವಿಮಲಾ, ಕಾತ್ಯಾಯಿನಿ ಪ್ರಾರ್ಥಿಸಿದರು.