ಬಿರುನಾಣಿ, ಡಿ. 17: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಕೈಕ ಪ್ರೌಢಶಾಲೆಯಾಗಿರುವ ಮರೆನಾಡು ಪ್ರೌಢಶಾಲೆಯ 55ನೇ ವಾರ್ಷಿಕೋತ್ಸವ ತಾ. 11 ರಂದು ಸಂಭ್ರಮದಿಂದ ಜರುಗಿತು. ಇದು ಅನುದಾನಿತ ಶಾಲೆಯಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲದೆ ಸಾರ್ವಜನಿಕರನ್ನೂ ತೊಡಗಿಸಿಕೊಂಡು ವರ್ಷಂಪ್ರತಿ ವಾರ್ಷಿಕೋತ್ಸವ ಆಚರಿಸಲ್ಪಡುತ್ತದೆ. ಕಾರ್ಯಕ್ರಮಗಳಿಗೆ ದಾನಿಗಳು ನೆರವು ನೀಡುವದು ವಿಶೇಷ.

ಈ ಬಾರಿಯ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬೊಟ್ಟಂಗಡ ಮಾಚಯ್ಯ ಅವರು ಧ್ವಜಾರೋಹಣ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರಿನ ಚೆನ್ನಬಸವ ಅವರು ಕ್ರೀಡಾಕೂಟದ ಉದ್ಘಾಟನೆ ಮಾಡಿದರು. ನಂತರ ಕ್ರೀಡಾಕೂಟದ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸೈನಿಕ ಕರ್ತಮಾಡ ನಾಣಯ್ಯ ಅವರು ಮಾತನಾಡಿ, ಸೇನೆಗೆ ಸೇರ್ಪಡೆ ಗೊಂಡು ದೇಶ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕರ್ತಮಾಡ ಮಿಲನ್ ಮೇದಪ್ಪ ಹಾಗೂ ಗುಡ್ಡಮಾಡ ಅಪ್ಪಿ ಸುಬ್ರಮಣಿ ಅವರು ಮಾಡಿದರೆ, ಶಾಲಾ ಖಜಾಂಚಿ ಹಾಗೂ ಹಿರಿಯ ವಿದ್ಯಾರ್ಥಿ ಬೊಜ್ಜಂಗಡ ಸಂಪತ್ ಮುತ್ತಣ್ಣ ಅವರು ಧ್ವನಿವರ್ಧಕ ವ್ಯವಸ್ಥೆ ಮಾಡಿದರು. ಶಾಮಿಯಾನ - ಆಸನ ವ್ಯವಸ್ಥೆಯನ್ನು ಕಾಳಿಮಾಡ ಜೆ. ಅಚ್ಚಪ್ಪ, ಕಾವೇರಿ ಶಾಮಿಯಾನ ಗೋಣಿಕೊಪ್ಪಲು ಇವರು ಕಲ್ಪಿಸಿದ್ದರು.

ಅಪರಾಹ್ನ 2 ಗಂಟೆಗೆ ಶಾಲೆಯ ಸ್ಥಾಪಕ ಸದಸ್ಯ ಕುಪ್ಪಡೀರ ಐ. ಕಾಳಪ್ಪ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿದ್ದ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಶ್ರೀ ಭೋದ ಸ್ವರೂಪಾನಂದಜಿ ಮಹಾರಾಜ್ ಹಾಗೂ ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ವೀರಾಜಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್, ಮರೆನಾಡು ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬೊಟ್ಟಂಗಡ ಮಾಚಯ್ಯ, ಉಪಾಧ್ಯಕ್ಷ ಕಾಯಪಂಡ ಸುನಿಲ್ ಮಾಚಯ್ಯ, ಗೌರವ ಕಾರ್ಯದರ್ಶಿ ಕುಪ್ಪಣಮಾಡ ಬೇಬಿ ನಂಜಮ್ಮ ದೇವಯ್ಯ, ಖಜಾಂಚಿ ಬೊಜ್ಜಂಗಡ ಸಂಪತ್ ಮುತ್ತಣ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿದ್ದರು.

ಈ ಸಂದರ್ಭ ವೀರಾಜಪೇಟೆ ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿನಿ ಆರಾಧನಾ ಶರ್ಮ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್ ಸನ್ಮಾನಿಸಿದರು.

ಮುಖ್ಯೋಪಾಧ್ಯಾಯ ಕಾಯಪಂಡ ಎಂ. ಕಿಶೋರ್ ಸ್ವಾಗತಿಸಿ, ಸಹ ಶಿಕ್ಷಕ ನಾಗರಾಜು ವಂದಿಸಿದರು. ಸಂಜೆ 6 ಗಂಟೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಂತರ 8 ಗಂಟೆಗೆ ಕೊಡವ ನೈಟ್ಸ್ ಸಿಂಪೋನಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿಯೂ ಭೋಜನದ ವ್ಯವಸ್ಥೆ ಯೊಂದಿಗೆ 55ನೇ ವಾರ್ಷಿಕೋತ್ಸವ ಸಮಾರಂಭ ಮುಕ್ತಾಯಗೊಂಡಿತು.