ವೀರಾಜಪೇಟೆ, ಡಿ. 17: ಅಮ್ಮತ್ತಿಯ ಮುಖ್ಯ ರಸ್ತೆಯಿಂದ ಮುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆ ಕಾಮಗಾರಿಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ತಂಡ ಇಂದು ಖುದ್ದು ಪರಿಶೀಲಿಸಿತು.
ಈ ಸಂದರ್ಭ ಮಾತನಾಡಿದ ಬೋಪಯ್ಯ, ರಾಜಕೀಯ ರಹಿತವಾಗಿ ತಾಲೂಕಿನಾದ್ಯಂತ ಹೊಸ ರಸ್ತೆ, ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವದು. ಕೊಡಗು ಜಿಲ್ಲೆಯಾದ್ಯಂತ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರ ವಿವಿಧ ಯೋಜನೆಯಡಿಯಲ್ಲಿ ರೂ. 28 ಕೋಟಿ ಮಂಜೂರು ಮಾಡಿದೆ. ಇದೇ ಅನುದಾನದಲ್ಲಿ ಮಡಿಕೇರಿ ವೀರಾಜಪೇಟೆ ಹೆದ್ದಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದರು. ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲ ಹಂತಗಳಲ್ಲೂ ರಸ್ತೆಗೆ ಆದ್ಯತೆ ನೀಡಲಾಗಿದೆ. ಕಾಮಗಾರಿ ಗುಣಮಟ್ಟ ಕಾಪಾಡಲು ಗುತ್ತಿಗೆದಾರರಿಗೆ ಕಟ್ಟು ನಿಟ್ಟಾಗಿ ಆದೇಶಿಸಲಾಗಿದೆ ಎಂದು ಹೇಳಿದರು.
ಮುತ್ತಪ್ಪ ದೇವಾಲಯದ ರಸ್ತೆಗೆ ವಿಶೇಷ ಪ್ಯಾಕೇಜ್‍ನಡಿಯಲ್ಲಿ ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಗೆ ಮಂಜೂರಾಗಿರುವ ರೂ. 34 ಲಕ್ಷಗಳ ಪೈಕಿ ರೂ. 6 ಲಕ್ಷ, ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. 5 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಅಮ್ಮತ್ತಿ ಚೌಡೇಶ್ವರಿ ದೇವಾಲಯದ ಕಾಂಕ್ರಿಟ್ ರಸ್ತೆಗೆ ರೂ. 10 ಲಕ್ಷ ವೆಚ್ಚ ಮಾಡ ಲಾಗುವದು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು. ಕಾಮಗಾರಿ ಪ್ರಗತಿ ಪರಿಶೀಲನೆ ಸಂದರ್ಭ ಬಿಜೆಪಿ ಕಾರ್ಯಕರ್ತರುಗಳಾದ ಜೆಪ್ಪು ಅಚ್ಚಪ್ಪ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಣಾ ಭೀಮಯ್ಯ, ಉಪಾಧ್ಯಕ್ಷೆ ಬಿ. ಸುನೀತಾ, ಮಲ್ಲಂಡ ಮಧು ದೇವಯ್ಯ, ಎಂ.ಎ. ಸುರೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಎನ್.ಎಸ್. ಪ್ರಶಾಂತ್, ಅರುಣಾ, ರವಿ, ದೀಪಕ್ ಮತ್ತಿತರರು ಹಾಜರಿದ್ದರು.