ಗೋಣಿಕೊಪ್ಪಲು, ಡಿ. 17: ಮನುಷ್ಯನಿಗೆ ಆರೋಗ್ಯ ಮುಖ್ಯ. ಉತ್ತಮ ಶರೀರವಿದ್ದಲ್ಲಿ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದಾಗಿದೆ. ನಮ್ಮ ಮನಸ್ಸನ್ನು ದಿನನಿತ್ಯ ಶಾಂತಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಪರಿಣಿತ ವೈದ್ಯರ ಸಲಹೆಯೊಂದಿಗೆ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರ ಸದ್ಭಳಕೆ ಮಾಡಿಕೊಳ್ಳಿ ಎಂದು ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀ ಪರಹಿತಾನಂದ ಸ್ವಾಮೀಜಿ ಸಲಹೆ ನೀಡಿದರು.
ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮೈಸೂರು ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಗೋಣಿಕೊಪ್ಪಲಿನ ವೈದ್ಯೆ ಡಾ. ಶಿಲ್ಪಿಕಾ ನೇತೃತ್ವದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ದೇಹವನ್ನು ಐದು ಕೋಶಗಳಾಗಿ ವಿಭಜಿಸಲಾಗಿದೆ. ಅನ್ನಮಯ ಕೋಶ, ಮನೋಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ ಹಾಗೂ ಆನಂದ ಮಯ ಕೋಶ. ಇವೆಲ್ಲವೂ ಪೂರಕವಾಗಿ ಕೆಲಸ ನಿರ್ವಹಿಸಿದ್ದಲ್ಲಿ ಮಾತ್ರಾ ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯ ಎಂದು ಸ್ವಾಮೀಜಿ ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಡಾ. ಗುರು ಬಸವರಾಜು, ಹಾಲೆಂಡ್‍ನ ಪ್ರತಿನಿಧಿಗಳು, ಸಮಾಜ ಸೇವಕಿ ವಿಜು ದೇವಯ್ಯ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ, ಗ್ರಾ.ಪಂ.ಅಧ್ಯಕ್ಷೆ ಎಂ. ಸೆಲ್ವಿ, ಪಿಡಿಓ ಚಂದ್ರಮೌಳಿ, ಗ್ರಾ.ಪಂ. ಸದಸ್ಯರಾದ ಬಿ.ಎನ್. ಪ್ರಕಾಶ್, ಯಾಸ್ಮೀನ್, ಮಂಜುಳಾ, ಮಹಿಳಾ ಸಮಾಜ ಅಧ್ಯಕ್ಷೆ ಸುಮಿ ಸುಬ್ಬಯ್ಯ ಉಪಸ್ಥಿತರಿದ್ದರು. ಡಾ. ಶಿಲ್ಪಿಕಾ ಅವರೊಂದಿಗೆ ಮೈಸೂರು ಜೆಎಸ್‍ಎಸ್ ಆಸ್ಪತ್ರೆಯ ಡಾ. ಉಷಾ, ಡಾ. ಪೂರ್ವಿಕಾ ಹಾಗೂ ಡಾ. ಜೀನಾ ಸಹಕಾರ ನೀಡಿದರು. ಆರೋಗ್ಯ ಶಿಬಿರ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು.