ಸೋಮವಾರಪೇಟೆ, ಡಿ. 17: ಜಿಲ್ಲೆಯಲ್ಲಿರುವ ಭೋವಿ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರ ನೀಡುವದರೊಂದಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಅರ್ಹರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕವಾಗಿರುವ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಪದಾಧಿಕಾರಿ ಗಳು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆರ್ಥಿಕವಾಗಿ ತೀರಾ ಹಿಂದುಳಿದಿ ರುವ ಭೋವಿ ಜನಾಂಗದವರಿಗೆ ತಾಲೂಕು ಕಚೇರಿಗಳಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ನೀಡುತ್ತಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ತಕ್ಷಣ ಭೋವಿ ಜನಾಂಗದವರಿಗೆ ಪರಿಶಿಷ್ಟ ಜಾತಿ ದೃಢೀಕರಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುಜಿತ್ ಮನವಿ ಮಾಡಿದರು.
ಇದರೊಂದಿಗೆ ಮೀಸಲಾತಿ ಬಗ್ಗೆ ಅವೈಜ್ಞಾನಿಕ ವರದಿ ನೀಡಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು. ಭೋವಿ ಸಮುದಾಯಕ್ಕೆ ಕೇವಲ ಶೇ. 1ರಷ್ಟು ಮೀಸಲಾತಿ ನೀಡಬೇಕೆಂಬ ಶಿಫಾರಸ್ಸು ಈ ವರದಿಯಲ್ಲಿದ್ದು, ಈಗಾಗಲೇ ಸಮಾಜದ ಕೆಳಸ್ತರದಲ್ಲಿರುವ ಈ ಸಮುದಾಯ ಇನ್ನಷ್ಟು ತುಳಿತಕ್ಕೆ ಒಳಗಾಗಲಿದೆ ಎಂದು ಸುಜಿತ್ ವಿವರಿಸಿದರು.
ಯುವ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನಾಪೋಕ್ಲು ಹೋಬಳಿ ಘಟಕದ ಪ್ರ. ಕಾರ್ಯದರ್ಶಿ ರಾಜೇಂದ್ರ, ಶಿವಕುಮಾರ್, ಹೋಬಳಿ ಸಂಚಾಲಕ ವಿನಿತ್ ಸೇರಿದಂತೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.